ಮುಗ ಮನೆ ಅಂಚನ್ ಕುಟುಂಬಸ್ಥರ ತರವಾಡು ಮನೆಯಲ್ಲಿ ಎರಡನೇ ವರ್ಷದ ‘ಆಟಿಡೊಂಜಿ ಅಂಚನ್ ಕೂಟ’

0

ಆಟಿ ನಮ್ಮ ಸಂಸ್ಕೃತಿ, ಕುಟುಂಬ ಬಾಂಧವ್ಯವನ್ನು ಗಟ್ಟಿಗೊಳಿಸುವ ಪವಿತ್ರ ಆಚರಣೆ : ಪ್ರಕಾಶ್ ಅಂಚನ್

ಬಂಟ್ವಾಳ: ಮುಗ ಮನೆ ಅಂಚನ್ ಕುಟುಂಬಸ್ಥರ ತರವಾಡು ಮನೆಯಲ್ಲಿ ಎರಡನೇ ವರ್ಷದ ‘ಆಟಿಡೊಂಜಿ ಅಂಚನ್ ಕೂಟ’ ಕಾರ್ಯಕ್ರಮವು ಜುಲೈ 26ರಂದು (ಆದಿತ್ಯವಾರ) ಸಂಭ್ರಮ ಹಾಗೂ ಸಾಂಪ್ರದಾಯಿಕ ವೈಭವದೊಂದಿಗೆ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಗ ಮನೆ ಅಂಚನ್ ಕುಟುಂಬ ಟ್ರಸ್ಟ್‌ನ ಅಧ್ಯಕ್ಷ ಪ್ರಕಾಶ್ ಅಂಚನ್, “ಆಟಿ ತಿಂಗಳು ನಮ್ಮ ಪೂರ್ವಜರು ಪಾಲಿಸಿಕೊಂಡು ಬಂದ ಸಂಪ್ರದಾಯ, ಸಂಸ್ಕೃತಿ ಹಾಗೂ ಜೀವನ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಪವಿತ್ರ ಕಾಲ. ಇಂತಹ ಕುಟುಂಬ ಸಮಾಗಮಗಳ ಮೂಲಕ ಹಿರಿಯರ ಅನುಭವ, ಕಿರಿಯರ ಪ್ರತಿಭೆ ಹಾಗೂ ಕುಟುಂಬದ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುತ್ತದೆ. ನಮ್ಮ ಮಕ್ಕಳಿಗೆ ತಮ್ಮ ಸಂಸ್ಕೃತಿ, ಆಚರಣೆ ಮತ್ತು ಪರಂಪರೆಯ ಬಗ್ಗೆ ಅರಿವು ಮೂಡಿಸುವುದು ಪ್ರತಿಯೊಂದು ಕುಟುಂಬದ ಜವಾಬ್ದಾರಿಯಾಗಿದೆ. ಇದೇ ಉದ್ದೇಶದಿಂದ ಆಟಿಡೊಂಜಿ ಅಂಚನ್ ಕೂಟವನ್ನು ಆಯೋಜಿಸಲಾಗಿದ್ದು, ಮುಂದಿನ ವರ್ಷಗಳಲ್ಲಿಯೂ ಇನ್ನಷ್ಟು ಅರ್ಥಪೂರ್ಣವಾಗಿ ನಡೆಸಲಾಗುವುದು,” ಎಂದು ಹೇಳಿದರು.

ಆಟಿ ತಿಂಗಳ ಸಂಪ್ರದಾಯವನ್ನು ನೆನಪಿಸುವ ಉದ್ದೇಶದಿಂದ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ 18 ಬಗೆಯ ಆಟಿದ ವನಸ್-ತೆನಸ್ಗಳನ್ನು ಕುಟುಂಬದ ಸದಸ್ಯರು ತಮ್ಮ ಮನೆಗಳಲ್ಲಿಯೇ ಸಿದ್ಧಪಡಿಸಿ ಪ್ರದರ್ಶಿಸಿದರು. ಅಲ್ಲದೆ ಕಿರಿಯರಿಂದ ಹಿರಿಯರವರೆಗೆ ಎಲ್ಲರೂ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.

ಕುಟುಂಬದ ಮಕ್ಕಳ ಪ್ರತಿಭೆಗೆ ತರವಾಡು ಮನೆಯಿಂದಲೇ ಪ್ರೋತ್ಸಾಹ ಮತ್ತು ಅವಕಾಶ ದೊರೆಯಬೇಕು ಎಂಬ ಉದ್ದೇಶದಿಂದ ವಿವಿಧ ಪ್ರತಿಭಾ ಪ್ರದರ್ಶನಗಳಿಗೆ ವೇದಿಕೆ ಕಲ್ಪಿಸಲಾಗಿತ್ತು. ಇದೇ ಸಂದರ್ಭದಲ್ಲಿ 2025–26ನೇ ಸಾಲಿನ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿ ಪರೀಕ್ಷೆಗಳಲ್ಲಿ 80 ಶೇಕಡಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಕಂಕನಾಡಿ ಗರಡಿ ಕ್ಷೇತ್ರದ ಆಡಳಿತ ಟ್ರಸ್ಟಿಯಾಗಿ ಹಾಗೂ ಪ್ರಸ್ತುತ ಕ್ಷೇತ್ರದ ವ್ಯವಸ್ಥಾಪಕರಾಗಿ ಆಯ್ಕೆಯಾದ ಕುಟುಂಬದ ಸದಸ್ಯ ದಿನೇಶ್ ಅಂಚನ್ ಅವರನ್ನು ವಿಶೇಷವಾಗಿ ಗೌರವಿಸಲಾಯಿತು.

ಕಾರ್ಯಕ್ರಮದ ಮತ್ತೊಂದು ವಿಶೇಷ ಆಕರ್ಷಣೆಯಾಗಿ, ಸನ್ಮಾನಿತ ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ ಹ್ಯಾಂಡ್‌ಮೇಡ್ ಲಿಪ್ಪನ್ ಆರ್ಟ್ (Lippan Art) ಮಣ್ಣು ಮತ್ತು ಕನ್ನಡಿಯ ಕಲಾಕೃತಿಯಿಂದ ತಯಾರಿಸಿದ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಭಾರತದ ಸಾಂಪ್ರದಾಯಿಕ ಕರಕುಶಲ ಪರಂಪರೆಯನ್ನು ಮಕ್ಕಳಿಗೆ ಪರಿಚಯಿಸುವ ಉದ್ದೇಶದಿಂದ ಈ ವಿಶಿಷ್ಟ ಸ್ಮರಣಿಕೆಯನ್ನು ಆಯ್ಕೆ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಅಂಚನ್, ಉಪಾಧ್ಯಕ್ಷ ದಿನೇಶ್ ಅಂಚನ್, ಹರೀಶ್ ಅಂಚನ್,ಕುಟುಂಬದ ಸಲಹೆಗಾರದ ಶೇಖರ್ ಅಂಚನ್ ಪಿಲ್ಕಜೆಗುತ್ತು ಅಂಚನ್ ಸಿಲ್ಕ್ಸ್ ಬೈಪಾಸ್ ಬಂಟ್ವಾಳ ಕುಟುಂಬದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಅಂಚನ್, ಪೂಜಾರಿ ಶೀನಾ ಪೂಜಾರಿ, ಖಜಾಂಚಿ ಜಯಂತ್ ಅಂಚನ್, ಉಮೇಶ್ ಅಂಚನ್, ನವೀನ್ ಕಲ್ಲಡ್ಕ, ಲೋಕೇಶ್ ನಾವೂರು, ನವೀನ್ ಸುಜೀರು, ರಂಜಿತ್, ಗಣೇಶ್, ವಿನೀತ್, ವಿಕೇಶ್ ಹಾಗೂ ಸಮಿತಿ ಸದಸ್ಯರು ಮತ್ತು ಕುಟುಂಬದ ಬಂಧು-ಬಳಗದವರು ಉಪಸ್ಥಿತರಿದ್ದರು.

ದಿನೇಶ್ ಅಂಚನ್ ಸ್ವಾಗತಿಸಿದರು. ಶೇಖರ್ ಅಂಚನ್ ಕಾರ್ಯಕ್ರಮ ನಿರೂಪಿಸಿದರು. ಕುಟುಂಬದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಅಂಚನ್ ವಂದನಾರ್ಪಣೆ ಸಲ್ಲಿಸಿದರು.

LEAVE A REPLY

Please enter your comment!
Please enter your name here