ತುಂಬೆ ಬಿ.ಎ ವಿದ್ಯಾಸಂಸ್ಥೆಯಲ್ಲಿ “ಬಾಲಕಾರ್ಮಿಕ ಪದ್ಧತಿ” ವಿರುದ್ಧ ಕಾನೂನು ಮಾಹಿತಿ ಕಾರ್ಯಕ್ರಮ

0

ಮಕ್ಕಳು ದುಡಿಯುವ ಕಾರ್ಮಿಕರಲ್ಲ; ಅವರು ದೇಶದ ಭವಿಷ್ಯದ ನಿರ್ಮಾತೃಗಳು – ರಾಜೇಂದ್ರ ಪ್ರಸಾದ್ ಕೆ.ಎಸ್

ಬಂಟ್ವಾಳ: ತಾಲೂಕು ಕಾನೂನು ಸೇವೆಗಳ ಸಮಿತಿ, ಬಂಟ್ವಾಳ, ವಕೀಲರ ಸಂಘ (ರಿ.), ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ತುಂಬೆ ಕನ್ನಡ ಮಾಧ್ಯಮ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಜೂ. 18ರಂದು ತುಂಬೆ ಪದವಿ ಪೂರ್ವ ಕಾಲೇಜಿನ ಶಬನಾ ಸಭಾಂಗಣದಲ್ಲಿ ‘ಬಾಲಕಾರ್ಮಿಕ ಪದ್ಧತಿ ವಿರುದ್ಧ ಕಾನೂನು ಮಾಹಿತಿ ಕಾರ್ಯಕ್ರಮ’ ಯಶಸ್ವಿಯಾಗಿ ನಡೆಯಿತು.


ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಂಟ್ವಾಳದ ಪ್ರಧಾನ ಸಿವಿಲ್ ನ್ಯಾಯಾಧೀಶರು, ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ರಾಜೇಂದ್ರ ಪ್ರಸಾದ್ ಕೆ. ಎಸ್. ಅವರು, “ಮಕ್ಕಳು ದುಡಿಯುವ ಕಾರ್ಮಿಕರಲ್ಲ; ಅವರು ದೇಶದ ಭವಿಷ್ಯದ ನಿರ್ಮಾತೃಗಳು. ಪ್ರತಿಯೊಂದು ಮಗುವಿಗೂ ಶಿಕ್ಷಣ, ಆರೋಗ್ಯ, ಸುರಕ್ಷತೆ ಹಾಗೂ ಸಂತೋಷದಿಂದ ಬದುಕುವ ಹಕ್ಕಿದೆ. ಬಾಲಕಾರ್ಮಿಕ ಪದ್ಧತಿ ಮಕ್ಕಳ ಬಾಲ್ಯ, ಶಿಕ್ಷಣ ಮತ್ತು ಕನಸುಗಳನ್ನು ಕಸಿದುಕೊಳ್ಳುವ ಸಾಮಾಜಿಕ ಪಿಡುಗಾಗಿದೆ” ಎಂದು ಹೇಳಿದರು. 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಯಾವುದೇ ಉದ್ಯೋಗದಲ್ಲಿ ಕೆಲಸಕ್ಕೆ ನೇಮಿಸುವುದು ಕಾನೂನುಬಾಹಿರವಾಗಿದೆ. 14ರಿಂದ 18 ವರ್ಷ ವಯಸ್ಸಿನ ಮಕ್ಕಳನ್ನು ಅಪಾಯಕಾರಿ ಕೈಗಾರಿಕೆಗಳು ಹಾಗೂ ಅಪಾಯಕಾರಿಯಾದ ಕೆಲಸಗಳಲ್ಲಿ ತೊಡಗಿಸುವುದಕ್ಕೂ ಕಾನೂನಿನಲ್ಲಿ ನಿಷೇಧವಿದೆ. ಬಾಲಕಾರ್ಮಿಕರನ್ನು ದುಡಿಸುವುದು ಶಿಕ್ಷಾರ್ಹ ಅಪರಾಧವಾಗಿದ್ದು, ತಪ್ಪಿತಸ್ಥರಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ ಎಂದು ಕಾನೂನು ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಂಟ್ವಾಳ ಶಿಕ್ಷಣ ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ವಿದ್ಯಾರವರು ಮಾತನಾಡಿ, ಮಕ್ಕಳಿಗೆ ಶಿಕ್ಷಣವೇ ಅತ್ಯಮೂಲ್ಯ ಆಸ್ತಿಯಾಗಿದ್ದು, ಬಾಲಕಾರ್ಮಿಕ ಪದ್ಧತಿ ಅವರ ಶೈಕ್ಷಣಿಕ, ಮಾನಸಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ತೀವ್ರ ಹಾನಿಯನ್ನುಂಟುಮಾಡುತ್ತದೆ ಎಂದು ಹೇಳಿದರು.

ಬಂಟ್ವಾಳ ತಾಲೂಕು ವಕೀಲರ ಸಂಘದ ಉಪಾಧ್ಯಕ್ಷರಾದ ನರೇಂದ್ರನಾಥ ಭಂಡಾರಿ ಅವರು ಮಾತನಾಡಿ, ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನದ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಕಾನೂನು ಮಾಹಿತಿ ನೀಡಿದರು. ಬಂಟ್ವಾಳ ತಾಲೂಕು ಕಾನೂನು ಸೇವೆಗಳ ಸಮಿತಿಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಹಾಗೂ ಸಹಾಯಕ ಸರ್ಕಾರಿ ಅಭಿಯೋಜಕರಾದ ಹರಿಣಿ ಕುಮಾರಿ ಡಿ. ಅವರು ಬಾಲಕಾರ್ಮಿಕ ಪದ್ಧತಿ ವಿರುದ್ಧ ಜಾರಿಯಲ್ಲಿರುವ ಕಾನೂನುಗಳ ಕುರಿತು ಮಾಹಿತಿ ನೀಡಿದರು. ಮಕ್ಕಳ ಹಕ್ಕುಗಳ ಸಂರಕ್ಷಣೆ, ಬಾಲಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, ಕಾನೂನು ಉಲ್ಲಂಘಿಸಿದವರಿಗೆ ವಿಧಿಸಲಾಗುವ ಶಿಕ್ಷೆಗಳು ಹಾಗೂ ಸಾರ್ವಜನಿಕರ ಜವಾಬ್ದಾರಿಗಳ ಬಗ್ಗೆ ವಿವರವಾಗಿ ತಿಳಿಸಿದರು.

ಬಂಟ್ವಾಳ ತಾಲೂಕು ಕಾರ್ಮಿಕ ಇಲಾಖೆಯ ಕಾರ್ಮಿಕ ನಿರೀಕ್ಷಕರಾದ ಕುಮಾರಿ ಲವೀನಾ ಡಿ’ಸೋಜಾ ಅವರು ಮಾತನಾಡಿ, ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ ಕಾರ್ಮಿಕ ಇಲಾಖೆ ಕೈಗೊಂಡಿರುವ ತಪಾಸಣೆ, ರಕ್ಷಣಾ ಕಾರ್ಯಾಚರಣೆಗಳು ಹಾಗೂ ಮಕ್ಕಳನ್ನು ಶಿಕ್ಷಣದ ಮುಖ್ಯವಾಹಿನಿಗೆ ತರುವ ಪ್ರಯತ್ನಗಳ ಕುರಿತು ಮಾಹಿತಿ ನೀಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಬಂಟ್ವಾಳ ತಾಲೂಕಿನ ವಕೀಲರಾದ ಆಶಾ ಅವರು ಮಕ್ಕಳ ಹಕ್ಕುಗಳು, ಬಾಲಕಾರ್ಮಿಕ ಪದ್ಧತಿಯಿಂದ ಉಂಟಾಗುವ ದುಷ್ಪರಿಣಾಮಗಳು ಹಾಗೂ ಕಾನೂನು ಅರಿವಿನ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. ತುಂಬೆ ಪ ಪೂ ಕಾಲೇಜಿನ ಕಛೇರಿ ಅಧೀಕ್ಷಕರು ಅಬ್ದುಲ್ ಕಬೀರ್ .ಬಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ತುಂಬೆ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ವಿ. ಸುಬ್ರಹ್ಮಣ್ಯ ಭಟ್, ಉಪ ಪ್ರಾಂಶುಪಾಲರಾದ ದಿನೇಶ್ ಶೆಟ್ಟಿ ಅಳಿಕೆ, ತುಂಬೆ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ವಿದ್ಯಾ ಉಪಸ್ಥಿತರಿದ್ದರು.

ತುಂಬೆ ಪ್ರೌಢ ಶಾಲಾ ವಿಭಾಗದ ಸಹಾಯಕ ಪ್ರಾಧ್ಯಾಪಕ ರಮೇಶ್ ಕಾರ್ಯಕ್ರಮ ನಿರೂಪಿಸಿ, ಪ್ರೌಢಶಾಲಾ ಆಂಗ್ಲ ಮಾಧ್ಯಮ ವಿಭಾಗದ ಮುಖ್ಯ ಶಿಕ್ಷಕಿ ಸೌಮ್ಯ ಸ್ವಾಗತಿಸಿ, ಪ್ರೌಢಶಾಲಾ ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕ ಜಗದೀಶ ರೈ ಬಿ ವಂದಿಸಿದರು. ಸಂಸ್ಥೆಯ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here