ಉಳ್ಳಾಲ ಠಾಣಾ ಪೊಲೀಸರ ತನಿಖೆಯಲ್ಲಿ ಸತ್ಯಾಂಶ ಬಯಲು
ಸಾರ್ವಜನಿಕರಲ್ಲಿ ಭೀತಿ ಸೃಷ್ಠಿಸಿದ ಯುವಕನ ವಿರುದ್ಧ ಕಾನೂನು ಕ್ರಮ-ಪೊಲೀಸ್ ಕಮೀಷನರ್
ಮಂಗಳೂರು: ವ್ಯಕ್ತಿಯೋರ್ವ ತನ್ನ ಮೇಲೆ ದುಷ್ಕರ್ಮಿಗಳು ತಲ್ವಾರ್ ದಾಳಿ ನಡೆಸಲು ಯತ್ನಿಸಿದ್ದಾರೆ ಎಂದು ವದಂತಿ ಹಬ್ಬಿಸಿದ ಘಟನೆ ಆಗಸ್ಟ್ 3 ರಂದು ಬೆಳಗ್ಗೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಉಚ್ಚಿಲ ನಿವಾಸಿ ಕಿಶೋರ್ ಎಂಬಾತ ಬೆಳಿಗ್ಗೆ ಕೆ.ಸಿ ಗುಡ್ಡೆ ಬಳಿಯ ಮುಳ್ಳುಗಡ್ಡೆ ಎಂಬಲ್ಲಿ ತನ್ನನ್ನು ಯಾರೋ ಬೆನ್ನಟ್ಟಿ ತಲ್ವಾರಿನಿಂದ ದಾಳಿ ಮಾಡಲು ಯತ್ನಿಸಿದ್ದಾರೆ ಎಂದು ವದಂತಿ ಹಬ್ಬಿಸಿದ್ದ. ಈ ವಿಚಾರ ವ್ಯಾಪಕ ಪ್ರಚಾರವಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಅಹಿತಕರ ಘಟನೆಗಳು ನಡೆಯುತ್ತಿರುವುದರಿಂದ ಆತಂಕ ಸೃಷ್ಠಿಯಾಗಿತ್ತು. ಆದರೆ, ಉಳ್ಳಾಲ ಠಾಣಾ ಪೊಲೀಸರು ಕಿಶೋರ್ ಅವರನ್ನು ವಿಚಾರಣೆಗೆ ಒಳಪಡಿಸಿದ ವೇಳೆ ಸತ್ಯಾಂಶ ಹೊರ ಬಿದ್ದಿದೆ. ನನ್ನ ಮೇಲೆ ದಾಳಿ ಯತ್ನ ನಡೆದಿಲ್ಲ, ತಾನು ಸುಮ್ಮನೆ ವದಂತಿ ಹಬ್ಬಿಸಿರುವುದಾಗಿ ಆತ ತಿಳಿಸಿದ್ದಾನೆ ಎಂದು ಉಳ್ಳಾಲ ಠಾಣಾ ಪೊಲೀಸರು ಮಾಹಿತಿ ನೀಡಿದ್ದಾರೆ. ಸುಳ್ಳು ವದಂತಿ ಹಬ್ಬಿಸಿ ಸಾರ್ವಜನಿಕ ವಲಯದಲ್ಲಿ ಭೀತಿ ಹಾಗೂ ಶಾಂತಿ ಕದಡುವ ಯತ್ನ ಮಾಡಿರುವ ಕಿಶೋರ್ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ. ಪೊಲೀಸರ ಈ ಕಾರ್ಯವೈಖರಿಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.