ಬಂಟ್ವಾಳ: ಕರ್ನಾಟಕ ಸರಕಾರ 2ಬಿ ಮೀಸಲಾತಿ ರದ್ದುಪಡಿಸಿದನ್ನು ವಿರೋಧಿಸಿ ಹಾಗೂ 2ಬಿ ಮೀಸಲಾತಿಯನ್ನು ಪುನಃ ಸ್ಥಾಪಿಸುವಂತೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಂಟ್ವಾಳ ವಿಧಾನಸಭಾ ಕ್ಷೇತ್ರ ವತಿಯಿಂದ ಬಿ.ಸಿ ರೋಡಿನ ಕೈಕಂಬ ಜಂಕ್ಷನ್ ನಲ್ಲಿ ಪ್ರತಿಭಟನೆ ಜರುಗಿತು.
ಬಂಟ್ವಾಳ ವಿಧಾನಸಭಾ ಕ್ಷೇತ್ರದ ಎಸ್ ಡಿ ಪಿ ಐ ಅಭ್ಯರ್ಥಿ ಹಾಗೂ ಎಸ್ ಡಿ ಪಿ ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ಮಾತನಾಡಿ ಮೀಸಲಾತಿಯ ರದ್ದತಿಯು ಬಿಜೆಪಿ ಉದ್ದೇಶಿಸಿಕೊಂಡಿರುವ ಹಿಂದೂ ರಾಷ್ಟ್ರದ ಸಂಕಲ್ಪದ ಮುಂದುವರಿದ ಭಾಗವಾಗಿದೆ. ಮುಖ್ಯಮಂತ್ರಿ ಬೊಮ್ಮಾಯಿ ಆರೆಸ್ಸೆಸ್ಸಿನ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಮೀಸಲಾತಿ ಮುಸಲ್ಮಾನರ ಹಕ್ಕಿನ ಭಾಗ ಅದು ಮುಸಲ್ಮಾನರಿಗೆ ಸರಕಾರಗಳು ನೀಡುವ ಭಿಕ್ಷೆ ಅಥವಾ ಔದಾರ್ಯವಲ್ಲ. ಇದರ ವಿರುದ್ಧ ಎಸ್ ಡಿ ಪಿ ಐ ಇನ್ನಿತರ ಸಂಘಟನೆಗಳ ಜೊತೆಗೂಡಿಸಿಕೊಂಡು ಕಾನೂನಾತ್ಮಕವಾಗಿ ಹೋರಾಟ ಮಾಡಲಿದೆ ಎಂದರು.
ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಮೂನಿಷ್ ಆಲಿ ಬಂಟ್ವಾಳ ಪ್ರತಿಭಟನೆಯನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭ ಎಸ್ ಡಿ ಪಿ ಐ ದ.ಕ ಜಿಲ್ಲಾ ಸಮಿತಿ ಸದಸ್ಯ ಯೂಸುಫ್ ಆಲಡ್ಕ, ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಕಲಂದರ್ ಪರ್ತಿಪಾಡಿ, ಕ್ಷೇತ್ರ ಸಮಿತಿ ಸದಸ್ಯ ಶಾಹುಲ್ ಎಸ್ ಎಚ್, ಬಂಟ್ವಾಳ ಪುರಸಭಾ ಸಮಿತಿ ಅಧ್ಯಕ್ಷರಾದ ಶರೀಫ್ ವಳವೂರು ಮತ್ತು ಕಾರ್ಯಕರ್ತರು, ಹಿತೈಷಿಗಳು ಉಪಸ್ಥಿತರಿದ್ದರು. ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯ ಮುಬಾರಕ್ ಗೂಡಿನಬಳಿ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಅಶ್ರಫ್ ತಲಪಾಡಿ ನಿರೂಪಿಸಿದರು.