ಬಂಟ್ವಾಳ: ಬಂಟ್ವಾಳದ ಅನೇಕ ಗ್ರಾ.ಪಂ.ಗಳಲ್ಲಿ ಕುಡಿಯುವ ನೀರಿನ ದೂರುಗಳು ಬರುತ್ತಿದ್ದು,ಯಾವುದೇ ಕಾರಣಕ್ಕೂ ನೀರಿನ ಕೊರತೆಯಾಗದಂತೆ ಅಧಿಕಾರಿಗಳು ಪರ್ಯಾಯ ಕ್ರಮಗಳನ್ನು ಕೈಗೊಳ್ಳಬೇಕು,ಜೊತೆಗೆ ಹೊಸ ಕೊಳವೆ ಬಾವಿಗಳನ್ನು ಕೊರೆದು ಪೈಪ್ ಲೈನ್ ಗೆ ಕ್ರಮವಹಿಸಬೇಕು ಎಂದು ಶಾಸಕ ರಾಜೇಶ್ ನಾಯ್ಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಬಂಟ್ವಾಳ ತಾಲೂಕಿನಲ್ಲಿ ಉಂಟಾದ ಕುಡಿಯುವ ನೀರಿನ ಸಮಸ್ಯೆ ಗೆ ಪರಿಹಾರವನ್ನು ನೀಡುವ ಹಿನ್ನೆಲೆಯಲ್ಲಿ ತಾ.ಪಂ.ಎಸ್.ಜಿ.ಎಸ್.ಸಭಾಂಗಣದಲ್ಲಿ ಕರೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಈಗಾಗಲೇ ನೀರು ಕಡಿಮೆಯಾಗಿರುವ ಕೊಳವೆ ಬಾವಿಗಳನ್ನು ಪ್ಲಸ್ಸಿಂಗ್ ಮತ್ತು ಹೆಚ್ಚು ವರಿಯಾಗಿ ಆಳವನ್ನು ಕೊರೆಯಲು ಪ್ರಥಮ ಆದ್ಯತೆ ನೀಡಬೇಕು ಎಂದು ಗ್ರಾ.ಪಂ.ಸೂಚಿಸಿದರು.
ಕೊಳವೆ ಬಾವಿ ಬತ್ತಿಹೋಗಿದ್ದರೆ ಹೊಸದಾಗಿ ಕೊಳವೆ ಬಾವಿಗಳನ್ನು ಕೊರೆಯುವಂತೆ ಸೂಚಿಸಿದರು.ಇದಕ್ಕೆ ಸಂಬಂಧಿಸಿದಂತೆ ಪೈಪ್ ಲೈನ್ ಅಳವಡಿಕೆಗೆ 15 ನೇ ಹಣಕಾಸು ಬಳಕೆ ಮಾಡುವಂತೆ ಸೂಚಿಸಿದರು.
ಪ್ರಕರಣ ದಾಖಲಿಸಿ: ಸಿ.ಒ.ಕುಮಾರ್
ಕುಡಿಯುವ ನೀರು ಅಭಾವ ವಿರುವ ಗ್ರಾ.ಪಂ.ವ್ಯಾಪ್ತಿಯಲ್ಲಿ ನೀರಿನ ಲಭ್ಯತೆ ಇದ್ದರೂ ಸ್ಥಳೀಯ ರ ವಿರೋಧ ದ ಕಾರಣದಿಂದ ಬೋರುವೆಲ್ ಕೊರೆಯಲು ಅವಕಾಶವಿಲ್ಲ ಎಂದು ಸಹಾಯಕ ಇಂಜಿನಿಯರ್ ಕೃಷ್ಣ ಅವರು ಅಸಹಾಯಕತೆ ವ್ಯಕ್ತಪಡಿಸಿದಾಗ , ಅಧಿಕಾರಿಗಳು ಎಲ್ಲದಕ್ಕೂ ಅಸಹಾಯಕತೆ ತೋರಬೇಡಿ, ಕುಡಿಯುವ ನೀರಿಗೆ ಮೊದಲ ಆದ್ಯತೆಯಾಗಿದ್ದು, ವಿರೋಧ ವ್ಯಕ್ತಪಡಿಸುವವರ ಮೇಲೆ ಕಾನೂನು ಕ್ರಮಕ್ಕೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಮಾರ್ ಸೂಚನೆ ನೀಡಿದರು.
ಪ್ರಮುಖವಾದ ಸಭೆಗೆ ಗೈರುಹಾಜರಾದ ಪಿ.ಡಿ.ಒ.ಗಳಿಗೆ ನೋಟೀಸ್ ಜಾರಿ, ಅವರು ಕೂಡಲೇ ಮಂಗಳೂರು ಕಚೇರಿಗೆ ಬೇಟಿ ಕಾರಣ ನೀಡುವಂತೆ ತಿಳಿಸಿದರು.
ಪೆರಾಜೆ , ಕಡೇಶಿವಾಲಯ, ಕನ್ಯಾನ, ನರಿಕೊಂಬು, ಸಂಗಬೆಟ್ಟು, ಇರ್ವತ್ತೂರು ಗ್ರಾಮ ಪಂಚಾಯತ್ ಪಿಡಿಒ ಗಳು ಗೈರು ಹಾಜರಾಗಿದ್ದರು.
ಸಭೆಯಲ್ಲಿ ಇಒ.ರಾಜಣ್ಣ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ನರೇಂದ್ರ ಬಾಬು, ಬಂಟ್ವಾಳ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಬಿ.ಕೆ.ನಾಯಕ್ ಜಿ.ಕೆ.ನಾಯಕ್, ಮತ್ತಿತರರು ಉಪಸ್ಥಿತರಿದ್ದರು.