ಬಂಟ್ವಾಳ : ತಾಲೂಕಿನ ನಾವೂರು ಗ್ರಾಮದ ಅಗ್ರಹಾರ ಬೀದಿ ಎಂಬಲ್ಲಿ ಸ್ಥಳೀಯರಿಗೆ ಯಾವುದೇ ಮುನ್ಸೂಚನೆ ನೀಡದೆ ಹಾಗೂ ಆರೋಗ್ಯ ಸುರಕ್ಷಾ ಕ್ರಮವೂ ಕೈಗೊಳ್ಳದೆ ಮುಖ್ಯ ರಸ್ತೆಯ ಬದಿಯಲ್ಲೇ ಕಳೆದ ಮೂರು ತಿಂಗಳಿನಿಂದ ಕಾರ್ಯಾಚರಣೆ ನಡೆಸುತ್ತಿರುವ ಸಿಮೆಂಟ್ ಮಿಶ್ರಣ ಘಟಕದ ವಿರುದ್ದ ಸ್ಥಳೀಯ ನಿವಾಸಿಗಳು ಆಕ್ರೋಶಿತರಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಘಟಕವನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳು ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಂಗಳೂರು ಹಿರಿಯ ಪರಿಸರ ಅಧಿಕಾರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.
![](https://bantwala.suddinews.com/wp-content/uploads/2023/03/Agrahara-Mixing-Unit-4.jpg)
ನಮ್ಮ ನಿವಾಸಗಳಿಂದ ಕೇವಲ 100 ಮೀಟರ್ ಅಂತರದಲ್ಲಿ ಈ ಸಿಮೆಂಟ್ ಕಾಂಕ್ರೀಟ್ ಮಿಶ್ರಣ ಘಟಕ ಕಾರ್ಯಾರಂಭ ಮಾಡಿದ್ದು, ಈ ಬಗ್ಗೆ ಸ್ಥಳದಲ್ಲಿ ಯಾವುದೇ ನಾಮಫಲಕವಾಗಲೀ ಯೋಜನೆಗೆ ಸಂಬಂಧಪಟ್ಟ ವಿವರಗಳಾಗಲೀ ಅಳವಡಿಸಲಾಗಿಲ್ಲ. ಜನವಸತಿಗೆ ಅತ್ಯಂತ ಸಮೀಪದಲ್ಲಿಯೇ ಇಂತಹ ಮಾಲಿನ್ಯಕಾರಕ ಘಟಕದ ಸ್ಥಾಪನೆಗೆ ಅನುಮತಿ ನೀಡುವ ಮುನ್ನ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿರುವುದು ಘಟಕದ ಬಳಿಯೇ ವಾಸವಾಗಿರುವ ಇಲ್ಲಿನ ನಿವಾಸಿಗಳ ಗಮನಕ್ಕೇ ಬಂದಿರುವುದಿಲ್ಲ.
![](https://bantwala.suddinews.com/wp-content/uploads/2023/03/Agrahara-Mixing-Unit-5.jpg)
![](https://bantwala.suddinews.com/wp-content/uploads/2023/03/Agrahara-Mixing-Unit-1.jpg)
ಘಟಕದಿಂದ ಪರಿಸರಕ್ಕೆ ಬಿಡುಗಡೆಯಗುವ ಧೂಳು ಇನ್ನಿತರ ಪರಿಸರ ಹಾನಿಕಾರಕಗಳನ್ನು ನಿಯಂತ್ರಿಸುವ ಯಾವುದೇ ತಾಂತ್ರಿಕ ವ್ಯವಸ್ಥೆಯನ್ನು ಮಾಡದೆ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಘಟಕ ಕಾರ್ಯಾರಂಭಿಸಿದಂದಿನಿಂದ ಪರಿಸರಕ್ಕೆ ಹೊರಬಿಡುವ ವಿಪರೀತ ಧೂಳಿನಿಂದ ಸ್ಥಳೀಯ ನಿವಾಸಿಗಳಿಗೆ ತೀವ್ರ ತೊಂದರೆಯಾಗಿದ್ದು, ಸಿಮೆಂಟ್, ಜಲ್ಲಿ, ಮರಳುಗಳ ಧೂಳಿನ ಸೂಕ್ಷ್ಮ ಕಣಗಳು ಪರಿಸರಕ್ಕೆ ಯಾವುದೇ ಸುರಕ್ಷಾ ಕ್ರಮ ಅನುಸರಿಸದೆ ಬಿಡುತ್ತಿರುವುದರಿಂದ ಸ್ಥಳೀಯ ನಿವಾಸಿಗಳಿಗೆ ಅಲರ್ಜಿ, ಶ್ವಾಸಕೋಶದ ಸೋಂಕು ಮೊದಲಾದ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳಲಾರಂಭಿಸಿವೆ. ಸಣ್ಣ ಮಕ್ಕಳು ಹಾಗೂ ಹಿರಿಯ ನಾಗರಿಕರು ಇನ್ನಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ.
![](https://bantwala.suddinews.com/wp-content/uploads/2023/03/Agrahara-Mixing-Unit-2.jpg)
ಮನೆಗಳ ಒಳಗೂ ಹೊರಗೂ ಸಿಮೆಂಟಿನ ಧೂಳು ತುಂಬುತ್ತಿದ್ದು, ದಿನಕ್ಕೆ ಹಲವು ಬಾರಿ ಮನೆ ಶುಚಿಗೊಳಿಸಬೇಕಾದ ಅನಿವಾರ್ಯತೆ ಇದೆ. ಘಟಕದಿಂದ ಹೊರಬರುವ ಧೂಳು ಬಾವಿ ಸಹಿತ ಇತರ ನೀರಿನ ಮೂಲಗಳನ್ನೂ ಸೇರಿಕೊಂಡು ಕಲುಷಿತ ನೀರು ಕುಡಿಯಬೇಕಾದ ದುಸ್ಥಿತಿ ಇದೆ. ಪರಿಸರವಾಸಿಗಳ ಅಡಿಕೆ ತೋಟಗಳಿಗೆ ಹಾಗೂ ತರಕಾರಿ ಬೆಳೆಗಳಿಗೂ ಹಾನಿಯಾಗುತ್ತಿವೆ ಎಂದು ಪರಿಸರ ಅಧಿಕಾರಿಗೆ ನೀಡಿರುವ ಲಿಖಿತ ದೂರಿನಲ್ಲಿ ಆರೋಪಿಸಿರುವ ಸ್ಥಳೀಯ ನಿವಾಸಿಗಳು ಸಾರ್ವಜನಿಕವಾಗಿ ತೊಂದರೆ ಉಂಟಾಗುತ್ತಿರುವ ಜನವಸತಿ ಪ್ರದೇಶದಲ್ಲಿರುವ ಈ ಸಿಮೆಂಟ್ ಮಿಶ್ರಣ ಘಟಕದ ಬಗ್ಗೆ ಸೂಕ್ತ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.