ಪ. ಜಾತಿ, ಪಂಗಡದವರಿಗೆ, ಬಿಪಿಎಲ್ ಕಾರ್ಡುದಾರರಿಗೆ ಅಂತ್ಯ ಸಂಸ್ಕಾರದ ಸಹಾಯಧನವನ್ನು ಮತ್ತೆ ಅನುಷ್ಠಾನಗೊಳಿಸಲು ಗ್ರಾಮ ಸಭೆಯ ಮೂಲಕ ಒತ್ತಾಯ: ಬಾಲಕೃಷ್ಣ ಆಳ್ವ ಕೊಡಾಜೆ
ವಿಟ್ಲ: ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಹಾಗೂ ಬಿಪಿಎಲ್ ಕಾರ್ಡುದಾರರಿಗೆ ಹಿಂದೆ ನೀಡಲಾಗುತ್ತಿದ್ದ ಅಂತ್ಯ ಸಂಸ್ಕಾರದ ಸಹಾಯಧನವನ್ನು ಮತ್ತೆ ಅನುಷ್ಠಾನಗೊಳಿಸಲು ಸರಕಾರಕ್ಕೆ ಗ್ರಾಮ ಸಭೆಯ ಮೂಲಕ ಒತ್ತಾಯಿಸುತ್ತೇನೆ ಎಂದು ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆಯವರು ಹೇಳಿದರು.
ಅವರು ಮಾಣಿ ಗ್ರಾಮ ಪಂಚಾಯತ್ ನಲ್ಲಿ ನಡೆದ ದ್ವಿತೀಯ ಸುತ್ತಿನ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾಣಿ ಗ್ರಾಮ ಪಂಚಾಯತ್ ಕಳೆದ ಎರಡು ವರ್ಷಗಳಿಂದ ಗ್ರಾಮದ ಅಭಿವೃದ್ಧಿಯ ಜೊತೆಗೆ ಹಲವು ಕ್ರಿಯಾಶೀಲ ಯೋಜನೆಗಳನ್ನು ಜಾರಿಗೆ ತಂದಿದೆ. ಹಿಂದೂರುದ್ರಭೂಮಿ, ವಾಣಿಜ್ಯ ಸಂಕೀರ್ಣ, ಸರಕಾರಿ ಶಾಲೆಗೆ ನೂತನ ಶೌಚಾಲಯ ಮತ್ತಿತರ ಶಾಶ್ವತ ಯೋಜನೆಗಳೊಂದಿಗೆ ಗ್ರಾಮೀಣ ಭಾಗದ ರಸ್ತೆಗಳು, ಕುಡಿಯುವ ನೀರು, ದಾರದೀಪ ಇತ್ಯಾದಿ ಪ್ರಮುಖ ಕಾರ್ಯಗಳಿಗೆ ಆದ್ಯತೆಯನ್ನು ನೀಡಲಾಗಿದೆ. ಗ್ರಾಮದ ಅಭಿವೃದ್ಧಿ ಕಾರ್ಯಗಳ ದೃಷ್ಟಿಯಿಂದ ಗ್ರಾಮಸ್ಥರು ಪಂಚಾಯತ್ ಗೆ ಸಲ್ಲಿಸಬೇಕಾದ ಶುಲ್ಕ ತೆರಿಗೆಗಳನ್ನು ಸಮರ್ಪಕವಾಗಿ ನೀಡಬೇಕು ಎಂದು ಅವರು ಹೇಳಿದರು.
ಗ್ರಾಮ ಸಭೆಗೆ ಆಗಮಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗಳಿಗೆ ಸಂಬಂದಪಟ್ಟ ಮಾಹಿತಿಗಳನ್ನು ನೀಡಿದರು.
ಗ್ರಾಮ ಸಭೆಯ ನೋಡೆಲ್ ಅಧಿಕಾರಿಯಾಗಿ ಆಗಮಿಸಿದ್ದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಷಾರವರು ಮಾಣಿ ಗ್ರಾಮ ಪಂಚಾಯತ್ ನ ಕೆಲಸ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರೀತಿ ಡಿನ್ನಾ ಪಿರೇರಾ, ಸದಸ್ಯರಾದ ಇಬ್ರಾಹಿಂ.ಕೆ.ಮಾಣಿ, ಸುದೀಪ್ ಕುಮಾರ್ ಶೆಟ್ಟಿ, ಮೆಲ್ವಿನ್ ಕಿಶೋರ್ ಮಾರ್ಟಿಸ್, ನಾರಾಯಣ ಶೆಟ್ಟಿ, ರಮಣಿ. ಡಿ.ಪೂಜಾರಿ, ಸೀತಾ, ಸುಜಾತಾ ಮೊದಲಾದವರು ಉಪಸ್ಥಿತರಿದ್ದರು. ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಿರಿಜಾ ಸ್ವಾಗತಿಸಿದರು. ಕಾರ್ಯದರ್ಶಿ ಭಾರತಿ ವರದಿ ವಾಚಿಸಿ, ವಂದಿಸಿದರು. ಪಂಚಾಯತ್ ಸಿಬ್ಬಂದಿ ಸಹಕರಿಸಿದರು.