ಬಂಟ್ವಾಳ : ಬಂಟ್ವಾಳ ತಾಲೂಕು ವೀರಕಂಬ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಮಜಿ ವೀರಕಂಬ ಇಲ್ಲಿ ವೀರಕಂಬ ಗ್ರಾಮ ಪಂಚಾಯತ್ ವತಿಯಿಂದ ಮಕ್ಕಳ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷ ದಿನೇಶ್ ಇವರ ಅಧ್ಯಕ್ಷತೆಯಲ್ಲಿ ಜರಗಿತು.
ವೀರಕಂಬ ಗ್ರಾಮ ವ್ಯಾಪ್ತಿಯ ಶಾಲೆಗಳಾದ ಮಜಿ, ಕೆಲಿಂಜ, ಬಾಯಿಲ, ಶಾಲೆಯ ವಿದ್ಯಾರ್ಥಿಗಳು ಮಕ್ಕಳ ಗ್ರಾಮ ಸಭೆಯಲ್ಲಿ ಭಾಗವಹಿಸಿ ತಮ್ಮ ಶಾಲಾ ಪರವಾಗಿ ವಿವಿಧ ಬೇಡಿಕೆಗಳನ್ನು ಸಲ್ಲಿಸಿದರು.
ಕಳೆದ ಬಾರಿ ನಡೆದ ಮಕ್ಕಳ ಗ್ರಾಮ ಸಭೆಯಲ್ಲಿ ಮಕ್ಕಳಿಂದ ಬಂದ ಹೆಚ್ಚಿನ ಬೇಡಿಕೆಗಳನ್ನು ಬಗೆಹರಿಸಲಾಗಿದ್ದು ಮುಂದೆಯೂ ಶಾಲಾ ಮಕ್ಕಳ ಹಿತ ದೃಷ್ಟಿಯಿಂದ ಮಕ್ಕಳ ಬೇಡಿಕೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟು ಬಗೆಹರಿಸಲಾಗುವುದು ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿಶಾಂತ್ ಮಕ್ಕಳಿಗೆ ಭರವಸೆ ಕೊಟ್ಟು ಈ ವರ್ಷದ ಶಾಲಾ ಅವಧಿಯ ಕೊನೆಯ ಹಂತದಲ್ಲಿ ಇರುವುದರಿಂದ ಮಕ್ಕಳು ಶಾಲಾ ಪರೀಕ್ಷೆಗಳತ್ತ ಹೆಚ್ಚಿನ ಗಮನ ಕೊಟ್ಟು ಉತ್ತಮ ಅಂಕಗಳನ್ನು ಪಡೆದು, ಉತ್ತಮ ವಿದ್ಯಾರ್ಥಿಗಳಾಗಿ ಎಂದು ಶುಭ ಹಾರೈಸಿದರು .
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿನ ಗ್ರಂಥಾಲಯ ವತಿಯಿಂದ ನಡೆದ ಚಿಣ್ಣರಾ ಚಿತ್ತಾರ ಅಭಿಯಾನ ಹಾಗೂ ಅಮ್ಮನಿಗೊಂದು ಪತ್ರ ಕಾರ್ಯಕ್ರಮದ ಸ್ಪರ್ಧೆಯಲ್ಲಿ ವಿಜೇತರಾದ ಗ್ರಾಮ ವ್ಯಾಪ್ತಿಯ ಮೂರು ಶಾಲೆಗಳ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶೀಲಾ ನಿರ್ಮಲ ವೇಗಸ್, ಪಂಚಾಯತ್ ಸದಸ್ಯರಾದ ಗೀತಾ ಜಯಶೀಲ ಗಾಂಭೀರ, ಜನಾರ್ದನ ಪೂಜಾರಿ, ಗ್ರಂಥಪಾಲಕಿ ಗೀತಾ ಜಗದೀಶ್, ಮಜಿ ಶಾಲಾ ಮುಖ್ಯೋಪಾಧ್ಯಾಯ ನಾರಾಯಣ ಪೂಜಾರಿ ಎಸ್ ಕೆ. ಕೆಲಿಂಜ ಶಾಲಾ ಸಹ ಶಿಕ್ಷಕಿ ಉಷಾ ಸುವರ್ಣ, ಬಾಯಿಲ ಶಾಲಾ ಸಹ ಶಿಕ್ಷಕಿ ವಾರಿಜಾಕ್ಷಿ, ಮೂರು ಶಾಲಾ ಪ್ರತಿನಿಧಿ ವಿದ್ಯಾರ್ಥಿಗಳಾದ ಮಾನಸ, ಕೃತಿಕಾ, ಸಾನ್ವಿ ಉಪಸ್ಥಿತರಿದ್ದರು.
ಮಜಿ ಶಾಲಾ ಶಿಕ್ಷಕಿಯರಾದ ಶಕುಂತಲಾ ಎಂ ಬಿ, ಮೀನಾಕ್ಷಿ, ಪಂಚಾಯತ್ ಸಿಬ್ಬಂದಿ ವಿನುತಾ ಸಹಕರಿಸಿದರು.