ಬಂಟ್ವಾಳ: ರಾಜಕೀಯದಲ್ಲಿ ಅಧಿಕಾರದ ಹಿಂದೆ ಹೋಗದೆ, ಪಕ್ಷದ ಸಂಘಟನೆ ಹಾಗೂ ಅಭಿವೃದ್ಧಿಯ ವಿಚಾರದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಹೇಳಿದರು.
ಅವರು ಬಂಟ್ವಾಳ ಬಿಜೆಪಿ ವತಿಯಿಂದ ನಡೆಯುತ್ತಿರುವ ಗ್ರಾಮ ವಿಕಾಸ ಯಾತ್ರೆ- ಗ್ರಾಮದೆಡೆಗೆ ಶಾಸಕರ ನಡಿಗೆಯ 6 ನೇ ದಿನದ ಪಾದಯಾತ್ರೆಯ ಬಳಿಕ ಬಾಳ್ತಿಲ ಗ್ರಾಮದ ನೀರಪಾದೆ ದೈವಸ್ಥಾನದ ವಠಾರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.
ಊರಿನಲ್ಲಿ ಇನ್ನೂ ಅಭಿವೃದ್ಧಿಯಾಗದೆ ಉಳಿದಿದ್ದರೆ ಅಂತಹ ರಸ್ತೆಗಳ ಅಭಿವೃದ್ಧಿ ಮಾಡಲಾಗುವುದು. ಒಂದೊಂದು ರಸ್ತೆಗಳು ಅಭಿವೃದ್ಧಿಯಾಗದೆ ಉಳಿದಿರಬಹುದು.ಅದನ್ನು ಮುಂದಿನ ದಿನಗಳಲ್ಲಿ ಮಾಡುವ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಅವರು ತಿಳಿಸಿದರು.
ಮಾಜಿ ಶಾಸಕ ರುಕ್ಮಯ ಪೂಜಾರಿ ಮಾತನಾಡಿ, ದೇಶದ ಇಬ್ಭಾಗ ಮಾಡಿದ ಕಾಂಗ್ರೆಸ್ ಭಾರತ್ ಜೋಡೊ ಯಾತ್ರೆ ಮಾಡುತ್ತಿರುವುದು ಹಾಸ್ಯಾಸ್ಪದ. ಜನರಿಗೆ ಪರಿಚಯ ಇಲ್ಲದ ಪ್ರಿಯಾಂಕಾ ಗಾಂಧಿ ನಾ ನಾಯಕಿ ಎಂದು ಪರಿಚಯ ಮಾಡಿಕೊಳ್ಳುತ್ತಿರುವುದು ನಾಚಿಗೇಡಿನ ವಿಚಾರ. ಬಿಜೆಪಿ ಸಾಧನೆ, ಯೋಜನೆಯನ್ನು ಕಾಂಗ್ರೆಸ್ ಕಲ್ಪನೆ ಮಾಡುವುದು ಕೂಡ ಅಸಾಧ್ಯ. ಒಬ್ಬ ಶಾಸಕರು ಹೇಗಿರಬೇಕು ಎಂಬುದನ್ನು ರಾಜೇಶ್ ನಾಯ್ಕ್ ತೋರಿಸಿಕೊಟ್ಟಿದ್ದಾರೆ ಎಂದರು.
ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ,ನಗರ ನೀರು ಸರಬರಾಜು- ಒಳಚರಂಡಿ ನಿಗಮ ನಿರ್ದೇಶಕಿ ಸುಲೋಚನಾ ಜಿ.ಕೆ., ಯಾತ್ರೆಯ ಸಹಸಂಚಾಲಕ ಮಾಧವ ಮಾವೆ, ನರಿಕೊಂಬು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಯಶೋಧರ ಕರ್ಬೆಟ್ಟು, ಬಾಳ್ತಿಲ ಗ್ರಾ.ಪಂ.ಅಧ್ಯಕ್ಷೆ ಹಿರಣ್ಮಯಿ, ನರಿಕೊಂಬು ಗ್ರಾ.ಪಂ.ಉಪಾಧ್ಯಕ್ಷ ಪ್ರಕಾಶ್ ಮಡಿಮುಗೇರು ಉಪಸ್ಥಿತರಿದ್ದರು.
ಯಾತ್ರೆಯ ಸಂಚಾಲಕ ಬಿ.ದೇವದಾಸ್ ಶೆಟ್ಟಿ ಅವರು ಯಾತ್ರೆ ಸಾಗಿ ಬಂದ ಗ್ರಾಮಗಳಿಗೆ ಶಾಸಕರು ನೀಡಿದ ಅನುದಾನಗಳ ವಿವರ ನೀಡಿದರು.
ಬಂಟ್ವಾಳ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮೋಹನ್ ಪಿ.ಎಸ್. ಸ್ವಾಗತಿಸಿದರು. ಬಂಟ್ವಾಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ ಕಾರ್ಯಕ್ರಮ ನಿರ್ವಹಿಸಿದರು.