ದಾಸ ಪರಂಪರೆ ಸಂಸ್ಕಾರದ ಪಾಠವನ್ನು ಕಲಿಸುತ್ತದೆ: ಒಡಿಯೂರು ಶ್ರೀ
ವಿಟ್ಲ: ಸಮಯವನ್ನು ಸದುಪಯೋಗ ಪಡಿಸುವ ಗುಣ ನಮ್ಮದಾಗಬೇಕು. ನಮ್ಮ ಬದುಕನ್ನು ಸದುದ್ದೇಶಕ್ಕಾಗಿ ಸವೆಸುವಂತಾಗಬೇಕು. ಬೋಗದ ಬದುಕು ಬಿಟ್ಟು ತ್ಯಾಗದ ಬದುಕು ನಮ್ಮದಾಗಬೇಕು. ದಾಸ ಪರಂಪರೆ ಸಂಸ್ಕಾರದ ಪಾಠವನ್ನು ಕಲಿಸುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮಿಯವರು ಹೇಳಿದರು.
ಅವರು ಡಿ. 1ರಿಂದ ಡಿ. 7ರ ತನಕ ಸಂಸ್ಥಾನದಲ್ಲಿ ಶ್ರೀ ದತ್ತ ಜಯಂತಿ ಮಹೋತ್ಸವ-ಶ್ರೀ ದತ್ತ ಮಹಾಯಾಗ ಸಪ್ತಾಹದ ಪ್ರಯುಕ್ತ ನಡೆಯುತ್ತಿರುವ ಹರಿಕಥಾ ಸತ್ಸಂಗ ಸಾಪ್ತಾಹದ ಬಳಿಕ ನಡೆದ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದರು.
ಹೂವುಗಳು ಹಾಳಾಗದಂತೆ ಮಧುಮಕ್ಷಿಕೆ ಮಕರಂದ ವನ್ನು ಸಂಗ್ರಹಿಸುತ್ತದೆ. ಹಾಗೆಯೇ ನಾವು ಉತ್ತಮ ವಿಚಾರಗಳನ್ನು ಸಂಗ್ರಹಿಸುವವರಾಗಬೇಕು.
ಸದ್ವಿಚಾರವನ್ನು ಮೈಗೂಡಿಸಿಕೊಂಡು ಸತ್ಪ್ರಜೆಯಾಗಿ ಬಾಳಬೇಕು. ಜಗತ್ತೇ ನಮಗೆ ಗುರುವಾಗಿದೆ
ಸಮಾಜದಲ್ಲಿ ಇತ್ತೀಚಿನ ದಿನಗಳಲ್ಲಿ ಕೆಟ್ಟಚಟಗಳಿಗೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅವೆಲ್ಲವನ್ನು ತಡೆಯುವ ಕೆಲಸ ಎಲ್ಲರಿಂದಲೂ ಆಗಬೇಕಿದೆ.
ಜೀವನದಲ್ಲಿ ಗುರುವಿಗೆ ಶ್ರೇಷ್ಟ ಸ್ಥಾನವಿದೆ. ಅಜ್ಞಾನವನ್ನು ದೂರೀಕರಿಸಿ ಸುಜ್ಞಾನವನ್ನು ನೀಡುವವರು ಗುರು. ಜಗತ್ತಿನಿಂದ ಕಲಿಯುವುದು ಬಹಳಷ್ಟಿದೆ. ಎಲ್ಲರಿಗೂ ಶುಭವಾಗಲಿ ಎಂದರು.
ಈ ಸಂದರ್ಭದಲ್ಲಿ ಶ್ರದ್ಧಾ ಭಟ್ ಕಾಯರ್ ಪಳ್ಳ ಇವರಿಂದ ಭಕ್ತ ಅಂಬರೀಷ ಹರಿಕಥಾ ಪ್ರಸಂಗ ನಡೆಯಿತು. ತಬಲಾದಲ್ಲಿ ಮುರಳಿ ವಿಟ್ಲ, ಹಾರ್ಮೋನಿಯಂ ನಲ್ಲಿ ಪ್ರಸಾದ್ ಬಾಯಾರು ಸಹಕರಿಸಿದರು.
ಒಡಿಯೂರು ಶ್ರೀ ಗುರುದೇವ ಐ.ಟಿ.ಐ. ಕನ್ಯಾನ ಇದರ ಉಪನ್ಯಾಸಕ ಜಯಂತ ಅಜೇರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಇನ್ನೋರ್ವ ಉಪನ್ಯಾಸಕ ಶಿವಪ್ರಸಾದ್ ವಂದಿಸಿದರು.
ವೈದಿಕ ಕಾರ್ಯಕ್ರಮ:
ಬೆಳಗ್ಗೆ ಶ್ರೀ ಗಣಪತಿ ಹವನ, ನಾಗತಂಬಿಲ, ಶ್ರೀ ದತ್ತ ಮಹಾಯಾಗ ಸಪ್ತಾಹ, ವೇದ-ಗುರುಚರಿತ್ರೆ ಪಾರಾಯಣ ನಡೆಯಿತು. ಬಳಿಕ ಹರಿಕಥಾ ಸತ್ಸಂಗ ನಡೆದು, ಮಧ್ಯಾಹ್ನ ಮಹಾಪೂಜೆಯ ಬಳಿಕ ಪ್ರಸಾದ ವಿತರಣೆ ನಡೆದು ಮಹಾಸಂತರ್ಪಣೆ ಮಡೆಯಿತು. ಮಧ್ಯಾಹ್ನದ ಬಳಿಕ ರಾತ್ರಿಯವರೆಗೆ ತುಳು ನಾಟಕ ಸ್ಪರ್ಧೆ ನಡೆಯಿತು. ರಾತ್ರಿ ರಂಗಪೂಜೆ, ವಿಶೇಷ ಬೆಳ್ಳಿರಥೋತ್ಸವ ಸೇವೆ ನಡೆಯಿತು.
ಡಿ.7: ಸಂಸ್ಥಾನದಲ್ಲಿ ಶ್ರೀಗಳಿಂದ ಮಧುಕರಿ
ಬೆಳಗ್ಗೆ ಶ್ರೀ ದತ್ತಮಾಲಾಧಾರಿಗಳಿಂದ ನಾಮಸಂಕೀರ್ತನೆ, ಹರಿಕಥಾ ಸತ್ಸಂಗ ಸಮಾರೋಪ,
ಬಳಿಮ ಶ್ರೀಗಳವರಿಂದ ಧರ್ಮಸಂದೇಶ ಬಳಿಕ ವೇದ ಪಾರಾಯಣ-ಶ್ರೀಗುರುಚರಿತ್ರ ಪಾರಾಯಣ ಸಮಾಪ್ತಿ,
ಶ್ರೀದತ್ತ ಮಹಾಯಾಗದ ಪೂರ್ಣಾಹುತಿ, ಕಲ್ಪೋಕ್ತ ಪೂಜೆ, ಮಹಾಪೂಜೆ, ದತ್ತ ಸಂಪ್ರದಾಯದಂತೆ ಮಧುಕರೀ ಮಂತಾಕ್ಷತೆ, ಮಹಾಸಂತರ್ಪಣೆ ರಾತ್ರಿ 7 ರಿಂದ ರಂಗಪೂಜೆ, ವಿಶೇಷ ಬೆಳ್ಳಿ ರಥೋತ್ಸವ, ಉಯ್ಯಾಲೆ ಸೇವೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ
ರಾತ್ರಿ 9.30ರಿಂದ ಮಂಗಳೂರು ಕಲಾಸಂಘಮದ ಕಲಾವಿದರಿಂದ ವಿಜಯಕುಮಾರ್ ಕೊಡಿಯಾಲಬೈಲ್ ನಿರ್ದೇಶನದ ಶಿವದೂತೆ ಗುಳಿಗೆ ನಾಟಕ ಪ್ರದರ್ಶಣ ನಡೆಯಲಿದೆ.