ಯಶಸ್ವಿನಿ ಯೋಜನೆಯಲ್ಲಿ ನೋಂದಾಯಿಸಿಕೊಳ್ಳಲು ಡಿ.31 ಅಂತಿಮ ದಿನ

0

ಯಾವುದೇ ಸಹಕಾರಿ ಸಂಘಗಳ ಸದಸ್ಯರಿಗೂ ನೋಂದಾವಣೆಗೆ ಅವಕಾಶ

ಪುತ್ತೂರು:ರಾಜ್ಯ ಸರಕಾರ ಮರು ಜಾರಿಮಾಡಿದ `ಯಶಸ್ವಿನಿ ಯೋಜನೆ’ಗೆ ಸದಸ್ಯರ ನೋಂದಾವಣೆಯು ನ.1ರಿಂದ ಪ್ರಾರಂಭಗೊಂಡಿದ್ದು ಡಿ.31ಕ್ಕೆ ಅಂತಿಮಗೊಳ್ಳಲಿದೆ. ಯಾವುದೇ ಸಹಕಾರ ಸಂಘಗಳಲ್ಲಿ ಸದಸ್ಯರಾಗಿರುವವರು ಕೂಡಲೇ ಈ ಯೋಜನೆಯಲ್ಲಿ ನೋಂದಾಯಿಸಿಕೊಳ್ಳುವಂತೆ ಸಹಕಾರ ಸಂಘಗಳ ಸಹಾಯಕ ನಿಬಂಧಕರು ತಿಳಿಸಿದ್ದಾರೆ.


ಸಹಕಾರ ಸಂಘಗಳ ಸದಸ್ಯರ ಅನುಕೂಲಕ್ಕಾಗಿ ಜಾರಿಗೊಂಡಿರುವ ಈ ಯೋಜನೆಯಡಿ ಯಶಸ್ವಿನಿ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಒಂದು ಕುಟುಂಬಕ್ಕೆ 5 ಲಕ್ಷ ರೂ. ವರೆಗಿನ ವೆಚ್ಚದಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಬಹುದು. ಗ್ರಾಮೀಣ ಪ್ರದೇಶದ ಸಹಕಾರಿ ಸಂಘಗಳ ಸದಸ್ಯರಿಗೆ ನಾಲ್ಕು ಜನರ ಕುಟುಂಬಕ್ಕೆ ವಾರ್ಷಿಕ ರೂ.500 ಹಾಗೂ ನಾಲ್ಕು ಮಂದಿಗಿಂತ ಹೆಚ್ಚಿನ ಸದಸ್ಯರು ಇರುವ ಕುಟುಂಬಗಳಿಗೆ ಹೆಚ್ಚುವರಿ ಸದಸ್ಯರಿಗೆ ತಲಾ 100 ರೂ. ವಂತಿಗೆ ಪಾವತಿಸಬೇಕು. ನಗರ ಪ್ರದೇಶದ ಸಹಕಾರಿ ಸಂಘದ ಸದಸ್ಯರು ನಾಲ್ಕು ಸದಸ್ಯರ ಕುಟುಂಬಕ್ಕೆ ವಾರ್ಷಿಕ ರೂ. 1000 ಹಾಗೂ ನಾಲ್ಕು ಮಂದಿಗಿಂತ ಹೆಚ್ಚಿನ ಸದಸ್ಯರು ಇರುವ ಕುಟುಂಬ ಗಳಿಗೆ ಹೆಚ್ಚುವರಿ ಸದಸ್ಯರಿಗೆ ತಲಾ 200 ರೂ. ವಂತಿಗೆ ಪಾವತಿಸಿ, ನೊಂದಾಯಿಸಬಹುದು. ಪರಿಶಿಷ್ಟ ಜಾತಿ, ಪಂಗಡದವರಿಗೆ ನೋಂದಾವಣೆ ಉಚಿತವಾಗಿರುತ್ತದೆ.


ಯಶಸ್ವಿನಿ ಯೋಜನೆಯಲ್ಲಿ ಹೃದಯಕ್ಕೆ ಸಂಬಂಧಿಸಿದ ರೋಗಗಳು ಕಿವಿ, ಮೂಗು, ಗಂಟಲು, ವ್ಯಾಧಿಗಳು, ಕರುಳಿನ ಕಾಯಿಲೆಗಳು, ನರಗಳಿಗೆ ಸಂಬಂಧಿಸಿದ ಕಾಯಿಲೆಗಳು, ಕಣ್ಣಿನ ಕಾಯಿಲೆಗಳು, ಕರುಳಿನ ರೋಗಗಳು, ಸ್ತ್ರೀಯರಿಗೆ ಸಂಬಂಧಿಸಿದ ಕಾಯಿಲೆಗಳು ಹಾಗೂ ಇತರೆ ಅನುಸೂಚಿತ ಸಾಮಾನ್ಯ ರೋಗಗಳಿಗೆ ಸಂಬಂಧಿಸಿದ ಚಿಕಿತ್ಸಾ ಸೌಲಭ್ಯಗಳನ್ನು ರಾಜ್ಯದ ಯಶಸ್ವಿನಿ ನೆಟ್‌ವರ್ಕ್ ಆಸ್ಪತ್ರೆಯಲ್ಲಿ ಪಡೆದುಕೊಳ್ಳಬಹುದು. ಈ ಯೋಜನೆಯಲ್ಲಿ ಔಷಧಿ ವೆಚ್ಚ, ಆಸ್ಪತ್ರೆ ವೆಚ್ಚ, ಶಸ್ತ್ರ ಚಿಕಿತ್ಸೆಯ ವೆಚ್ಚ, ಆಪರೇಷನ್ ಥಿಯೇಟರ್ ಬಾಡಿಗೆ, ಅರೆವಳಿಕೆ ತಜ್ಞರು, ಸರ್ಜನ್, ಕನ್ಸಲ್ಟೆಂಟ್, ಬೆಡ್, ಶುಶ್ರೂಷಕಿ ಶುಲ್ಕ ವೆಚ್ಚಗಳನ್ನು ಒಳಗೊಂಡಿದೆ. ಫಲಾನುಭವಿಗಳು ಕಾರ್ಡ್ ಪಡೆದ 15 ದಿನಗಳ ಬಳಿಕ ಯೋಜನೆಯ ಪ್ರಯೋಜನ ಪಡೆಯಲು ಅರ್ಹರಾಗಿರುತ್ತಾರೆ.


ಯಾವುದೇ ಸಹಕಾರಿ ಸಂಘಗಳು, ಸೌಹಾರ್ದ ಸಹಕಾರಿ ಅಥವಾ ಬಹುರಾಜ್ಯ ಸಹಕಾರಿ ಸಂಘಗಳಲ್ಲಿ ನೊಂದಾಯಿಸಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ಸಹಕಾರ ಸಂಘಗಳಲ್ಲಿ ಸದಸ್ಯರಾಗಿ ಕನಿಷ್ಠ ಮೂರು ತಿಂಗಳಾಗಿರುವವರು ಮತ್ತು ಅವರ ಕುಟುಂಬ ವರ್ಗದವರಿಗೆ ಯಶಸ್ವಿನಿ ಯೋಜನೆಯಲ್ಲಿ ನೊಂದಾಯಿಸಿಕೊಳ್ಳಬಹುದು. ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಒಂದು ಭಾವಚಿತ್ರ, ಪರಿಶಿಷ್ಟ ಜಾತಿ, ಪಂಗಡದವರು ಜಾತಿ ಪ್ರಮಾಣ ಪತ್ರಗಳೊಂದಿಗೆ ಗ್ರಾಮಾಂತರ ಹಾಗೂ ನಗರ ಪ್ರದೇಶಗಳ ಸದಸ್ಯರಿಗೆ ನಿಗದಿಪಡಿಸಿದ ಮೊತ್ತವನ್ನು ಪಾವತಿಸಿ ನೋಂದಾಯಿಸಿಕೊಳ್ಳುವಂತೆ ಪುತ್ತೂರು ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ತ್ರಿವೇಣಿ ಆರ್. ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here