ಪರಿಷ್ಕೃತ ಯಶಸ್ವಿನಿ ಆರೋಗ್ಯ ಯೋಜನೆ ಖಾಸಗಿ ಆಸ್ಪತ್ರೆಗೆ ಹೊರೆ !

0

ಔಷಧಿ ವೆಚ್ಚಕ್ಕಿಂತಲೂ ಕಡಿಮೆ ನಿಗದಿಯಾಗಿರುವ ಸಂಭಾವನೆ

ಪುತ್ತೂರು:ಆರೋಗ್ಯ ಕಲ್ಯಾಣ ಕರ್ನಾಟಕ ಯೋಜನೆಯಡಿಯಲ್ಲಿ ವಿಲೀನಗೊಂಡು ಪರಿಷ್ಕೃತಗೊಂಡಿರುವ ಯಶಸ್ವಿನಿ ಯೋಜನೆಯಲ್ಲಿ ಕಾಯಿಲೆ/ಶಸ್ತ್ರ ಚಿಕಿತ್ಸೆಗಳಿಗೆ ಈ ಹಿಂದಿನ ಯಶಸ್ವಿನಿ ಯೋಜನೆಯಲ್ಲಿದ್ದ ಸಂಭಾವನೆಯನ್ನು ಕಡೆಗಣಿಸಿ ಆಯುಷ್ಮಾನ್ ಭಾರತ್/ಆರೋಗ್ಯ ಕರ್ನಾಟಕದಿಂದ ಸಂಭಾವನೆ ನೀಡುವ ಆದೇಶವಾಗಿದೆ.ಅದರಂತೆ,ಸಂಭಾವನೆಯು ಔಷಧಿಯ ವೆಚ್ಚಕ್ಕಿಂತಲೂ ಕಡಿಮೆ ಆಗಿರುವುದರಿಂದ ಚಿಕಿತ್ಸೆ ನೀಡುವುದು ಕಷ್ಟವೆನ್ನುವ ಅಭಿಪ್ರಾಯ ವೈದ್ಯ ಸಮೂಹದೊಳಗೆ ಚರ್ಚೆಯಾಗುತ್ತಿದೆ ಮಾತ್ರವಲ್ಲದೆ, ಯಶಸ್ವಿನಿ ಯೋಜನೆಯಡಿ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಕಡ್ಡಾಯವಾಗಿರುವುದರಿಂದ ಸಂಕಷ್ಟ ಅನುಭವಿಸುವಂತಾಗಿದೆ.


ಈ ಹಿಂದೆ ಸಹಕಾರ ಇಲಾಖೆಯಲ್ಲಿ ಯಶಸ್ವಿನಿ ಯೋಜನೆ 2003-04ರಲ್ಲಿ ಪ್ರಾರಂಭವಾಗಿದ್ದು, 2017-18ರವರೆಗೆ ಜಾರಿಯಲ್ಲಿತ್ತು.ನಂತರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ವರ್ಗಾವಣೆಗೊಂಡಿದ್ದು ದಿನಾಂಕ 31-5-2018ರಿಂದ ಈ ಯೋಜನೆಯು ಸ್ಥಗಿತಗೊಂಡಿತ್ತು.ದಿನಾಂಕ 1-6-2018ರಿಂದ ಆರೋಗ್ಯ ಕಲ್ಯಾಣ ಕರ್ನಾಟಕ ಯೋಜನೆಯೊಂದಿಗೆ ವಿಲೀನಗೊಂಡಿರುತ್ತದೆ.

ರಾಜ್ಯದೆಲ್ಲೆಡೆ ಸಹಕಾರಿಗಳ ಮತ್ತು ರೈತರ ನಿರಂತರ ಬೇಡಿಕೆಯಂತೆ ರಾಜ್ಯ ಸರ್ಕಾರವು 2022-23ನೇ ಸಾಲಿನ ಆಯವ್ಯಯದಲ್ಲಿ ಯಶಸ್ವಿನಿ ಯೋಜನೆಯನ್ನು ಪರಿಣಾಮಕಾರಿಯಾಗಿ ರೂಪಿಸಿ ಪರಿಷ್ಕೃತ ಯಶಸ್ವಿನಿ ಯೋಜನೆಯನ್ನು ಜಾರಿಗೊಳಿಸಿದೆ.ಆದರೆ ಈ ಪರಿಷ್ಕೃತ ಯೋಜನೆಯಲ್ಲಿ ವೈದ್ಯರು ನೀಡುವ ಚಿಕಿತ್ಸೆ ಮತ್ತು ಔಷಧಿಗೆ ಇಂತಿಷ್ಟೆ ದರ ಎಂದು ನಿಗದಿಪಡಿಸಲಾಗಿದೆ.ಚಿಕಿತ್ಸೆಗೆ ನಿಗದಿಪಡಿಸಿದ ದರ ಔಷಧಿಗೂ ಸಾಲುವುದಿಲ್ಲ ಎನ್ನುವಂತಾಗಿದೆ.ಔಷಧಿಯನ್ನು ರೋಗಿಗೆ ನಾವೇ ಹೆಚ್ಚು ಹಣ ಕೊಟ್ಟು ನೀಡಬೇಕಾಗುವ ಪರಿಸ್ಥಿತಿ ಬಂದಿದೆ ಎಂದು ವೈದ್ಯರು ಹೇಳಿಕೊಳ್ಳುತ್ತಿದ್ದಾರೆ.ಹಾಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಯಶಸ್ವಿನಿ ಯೋಜನೆಯಡಿ ರೋಗಿಗಳಿಗೆ ಚಿಕಿತ್ಸೆ ಕೊಡಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬರುತ್ತಿದೆ.

ಯಶಸ್ವಿನಿ ಯೋಜನೆಯಲ್ಲಿ ಈ ಹಿಂದಿದ್ದ ಸಂಭಾವನೆಯನ್ನು ಕಡೆಗಣಿಸಿ ಈಗಿರುವ ಆಯುಷ್ಮಾನ್ ಭಾರತ್/ಆರೋಗ್ಯ ಕರ್ನಾಟಕದ ಸಂಭಾವನೆಯನ್ನೇ ಕೊಡುವುದಾಗಿ ತಿಳಿಸಿದ್ದಾರೆ.ವೈದ್ಯರು ತಮ್ಮ ಸಂಭಾವನೆಯನ್ನು ತೆಗೆದುಕೊಳ್ಳದಿದ್ದರೂ ಆ ಹಣದಲ್ಲಿ ಖಾಸಗಿಯವರು ಚಿಕಿತ್ಸೆ ನೀಡಲು ಸಾಧ್ಯವಿಲ್ಲ.ಉದಾಹರಣೆಗೆ ವಿಷದ ಹಾವು ಕಡಿತಕ್ಕೆ ಚಿಕಿತ್ಸೆಗೆ ಕೇವಲ ರೂ.1,300 ನಿಗದಿಪಡಿಸಲಾಗಿದೆ.ಆದರೆ ವಿಷದ ಹಾವು ಕಡಿತಕ್ಕೊಳಗಾದ ವ್ಯಕ್ತಿಗೆ ನೀಡುವ ಚುಚ್ಚು ಮದ್ದಿಗೆ ರೂ.500ರಿಂದ 600 ದರ ಇದೆ.ರೋಗಿಗೆ ತಕ್ಷಣದ ಸಂದರ್ಭದಲ್ಲಿ 10ರಿಂದ 15 ಚುಚ್ಚುಮದ್ದು ಕೊಡಬೇಕಾಗುತ್ತದೆ.ಅದೇ ರೀತಿ ನ್ಯುಮೋನಿಯ ಕಾಯಿಲೆಯನ್ನು ಕೇವಲ ರೂ.1800ಕ್ಕೆ ಗುಣಪಡಿಸಬೇಕಾಗುತ್ತದೆ.ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲು ಖಾಸಗಿಯರಿಗೆ ರೂ.9 ಸಾವಿರ ಸಿಗುತ್ತದೆ.ಯಶಸ್ವಿನಿ ಯೋಜನೆಯ ರೋಗಿಗಳು ಖಾಸಗಿ ಕೊಠಡಿಗಳನ್ನು ಪಡೆಯುವಂತಿಲ್ಲ.
ಡಾ.ಎಸ್.ಎಸ್.ಜೋಶಿ, ಆದರ್ಶ ಆಸ್ಪತ್ರೆ ಪುತ್ತೂರು

LEAVE A REPLY

Please enter your comment!
Please enter your name here