ಮಂಚಿ: ಶ್ರೀ.ಗೋಪಾಲಕೃಷ್ಣ ಸೇವಾ ವಿಶ್ವಸ್ಥ ಮಂಡಳಿ (ರಿ).ಕನಕಗಿರಿ ಮಂಚಿ, ಕೊಳ್ನಾಡು ಗ್ರಾಮ ಬಂಟ್ವಾಳ ತಾಲೂಕು ಇಲ್ಲಿ ನೂತನವಾಗಿ ನಿರ್ಮಿಸಲಾದ “ಶ್ರೀ.ಕನಕ ಸಭಾ ಮಂಟಪ” ಇದರ ಉದ್ಘಾಟನಾ ಸಮಾರಂಭ ಅ: 21-22ರಂದು ನೆರವೇರಿತು.
ಅ.21ರಂದು ಸಂಜೆ ವಾಸ್ತುಪೂಜೆ, ವಾಸ್ತು ರಾಕ್ಷೋಘ್ನ ಹೋಮ ಜರುಗಿತು.
ಅ.22 ರಂದು ಸಂಜೆ ಪರಮಪೂಜ್ಯ ಶ್ರೀ.ಶ್ರೀ.ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳು ತೋಟಕಾಚಾರ್ಯ ಸಂಸ್ಥಾನ, ಎಡನೀರು ಮಠ ಇವರು ತಮ್ಮ ದಿವ್ಯಹಸ್ತದಿಂದ ವಿದ್ಯುಕ್ತವಾಗಿ ದೀಪ ಬೆಳಗುವುದರೊಂದಿಗೆ ಲೋಕಾರ್ಪಣೆ ಮಾಡಿ ” ಇಂತಹ ಭಜನಾಮಂದಿರಗಳು , ಸಭಾಮಂಟಪಗಳು ಸಾಂಸ್ಕೃತಿಕ ಧಾರ್ಮಿಕ ಕೇಂದ್ರಗಳಾಗಿ ಭಕ್ತರನ್ನು ಸನ್ಮಾರ್ಗದತ್ತ ಕೊಂಡೊಯ್ಯುತ್ತಿರುವುದರ ಹಿಂದೆ ಹಲವರ ಕೊಡುಗೆ ಸ್ಮರಣೀಯ. ಕೈಯ್ಯೂರು ನಾರಾಯಣ ಭಟ್ ರಂತಹವರ ಕೈಯ್ಯಲ್ಲಿ ಎಲ್ಲವೂ ಸಾಧ್ಯ. ತನ್ನವರನ್ನು ವಿಶ್ವಾಸದಿಂದ ಒಟ್ಟಿಗೆ ನಡೆಸಿಕೊಂಡು ಜನಮೆಚ್ಚುವ ಕೆಲಸ ಮಾಡುವುದರ ಹಿಂದೆ ದೇವರ ಆಶೀರ್ವಾದ ಸದಾ ಇರುತ್ತದೆ. ಇನ್ನಷ್ಟು ಸಮಾಜಮುಖಿ ಕೆಲಸ ಮಾಡುವುದಕ್ಕೆ ದೇವರು ಶಕ್ತಿ ಕೊಡಲಿ.” ಎಂದು ಶ್ಲಾಘನೀಯ ಮಾತುಗಳೊಂದಿಗೆ ಆಶೀರ್ವಚನ ಮಾಡಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಡಾ.ಶ್ರೀಧರ ಭಟ್ ಮಾವೆ ಸಾಲೆತ್ತೂರು, ಶ್ರೀ.ಸತೀಶ ಶೆಟ್ಟಿ, ಪತ್ತುಮುಡಿ ಚಿದಾನಂದ ರಾವ್, ಗೋಪಾಲಕೃಷ್ಣ ಭಟ್, ಸಿ.ಹೆಚ್ ಬಾಲಕೃಷ್ಣಶೆಟ್ಟಿ ಶುಭಹಾರೈಸಿದರು. ಮಂಡಳಿ ಅಧ್ಯಕ್ಷ ಶ್ರೀ.ಸೀತಾರಾಮ ಶೆಟ್ಟಿ ಸಿ.ಹೆಚ್ ಉಪಸ್ಥಿತರಿದ್ದರು. ಕೈಯ್ಯೂರು ನಾರಾಯಣ ಭಟ್ ಪ್ರಾಸ್ತವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಮಹಾಲಿಂಗ ಭಟ್ ಮತ್ತು ನ್ಯಾಯವಾದಿ ರವೀಂದ್ರ ಕುಕ್ಕಾಜೆ ನಿರೂಪಿಸಿ ವಂದಿಸಿದರು. ನಂತರ ಕಾಲಮಿತಿ ಯಕ್ಷಗಾನ ಬಯಲಾಟ ನಡೆಯಿತು ಅದರ ಮೊದಲು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.