ಮಂಗಳೂರು: ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಆಶ್ರಯದಲ್ಲಿ ಏರ್ಪಡಿಸಲಾದ `ಸ್ವಾತಂತ್ರ್ಯದಿಂದ ಅಂತ್ಯೋದಯದವರೆಗೆ’ ಅಭಿಯಾನದ ಯಶಸ್ವಿ ಅನುಷ್ಠಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು ರಾಷ್ಟ್ರಮಟ್ಟದಲ್ಲಿ 5ನೇ ಸ್ಥಾನ ಗಳಿಸಿದೆ.
ಸ್ವಾತಂತ್ರ್ಯ ಹೋರಾಟದ ನಂಟು ಹೊಂದಿದ್ದ ಆಯ್ದ 75ಜಿಲ್ಲೆಗಳಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಸಲುವಾಗಿ 90 ದಿನಗಳ ಕಾಲ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.ಏಪ್ರಿಲ್ 28ರಿಂದ 25ರವರೆಗೆ ನಡೆದ ಈ ಅಭಿಯಾನದಲ್ಲಿ ದ.ಕ.ಜಿಲ್ಲೆಯು ಶೇ 84.40ರಷ್ಟು ಸಾಧನೆ ಮಾಡಿದೆ.
ಕೇಂದ್ರದ ಒಂಬತ್ತು ಸಚಿವಾಲಯಗಳ 17 ಕಾರ್ಯಕ್ರಮಗಳ ಅನುಷ್ಠಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು ಗಮನಾರ್ಹ ಸಾಧನೆ ಮಾಡಿದೆ.ಸೆ.೨೬ರಂದು ನವದೆಹಲಿಯ ಇಂಡಿಯಾ ಹ್ಯಾಬಿಟ್ಯಾಟ್ ಸೆಂಟರ್ನ ಜಕರಂದ ಸಭಾಂಗಣದಲ್ಲಿ ಅಭಿನಂದನಾ ಸಮಾರಂಭ ನಡೆಯಲಿದೆ.ಈ ಸಮಾರಂಭಕ್ಕೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರಿಗೆ ಆಹ್ವಾನ ಕಳುಹಿಸಿರುವ ಸಚಿವಾಲಯದ ಜಂಟಿ ಕಾರ್ಯದರ್ಶಿ ಕರ್ಮ ಝಿಂಪ ಭುಟಿಯಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಅವರನ್ನೊಳಗೊಂಡ ತಂಡದೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸೂಚಿಸಿದ್ದಾರೆ.