ಬಂಟ್ವಾಳ : ಬ್ರಹ್ಮಶ್ರೀ ನಾರಾಯಣ ಗುರುವರ್ಯರ 168ನೇ ಜನ್ಮದಿನಾಚರಣೆಯ ಸಮಾರೋಪ ಸಮಾರಂಭವು ಸೆ. 11ರಂದು ಆದಿತ್ಯವಾರ ಪೂರ್ವಾಹ್ನ 11 ಗಂಟೆಗೆ ನಡೆಯಲಿರುವುದು.
ಈ ಕಾರ್ಯಕ್ರಮಕ್ಕೆ ಧರ್ಮಸ್ಥಳದ ಶ್ರೀ ರಾಮ ಕ್ಷೇತ್ರ ಕನ್ಯಾಡಿಯ ಪೀಠಾಧೀಶರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ. ಸೇಸಪ್ಪ ಕೋಟ್ಯಾನ್ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಭಾಗವಹಿಸಲಿರುವರು. ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ್ ಅವರು ಪ್ರಾಸ್ತಾವಿಕವಾಗಿ ಭಾಷಣ ಮಾಡಲಿರುವರು.
ಸಮಾರಂಭದಲ್ಲಿ ತುಳು ಸಾಹಿತ್ಯ ಅಕಾಡೆಮಿ ರಾಜ್ಯ ಪ್ರಶಸ್ತಿ ವಿಜೇತರಾದ ಎಂ. ತುಂಗಪ್ಪ ಬಂಗೇರ, ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ವಿಜೇತರಾದ ಶೈಲಜಾ ರಾಜೇಶ್, ಬಿ.ಸಿ.ರೋಡ್ ಶ್ರೀ ರಕ್ತೇಶ್ವರಿ ದೇವಸ್ಥಾನದ ಅಧ್ಯಕ್ಷ ಬಿ.ವಿಶ್ವನಾಥ ಇವರನ್ನು ಸನ್ಮಾನಿಸಲಾಗುವುದು. ಆರ್ಯಭಟ್ ಪ್ರಶಸ್ತಿ ವಿಜೇತೆ ವಿದೂಷಿ ಡಾ. ದಾಕ್ಷಾಯಿಣಿ ಕಂದೂರು, ಎಂ.ಕಾಂ. ಪದವಿಯಲ್ಲಿ ರ್‍ಯಾಂಕ್ ವಿಜೇತೆ ಸ್ವಾತಿ ಕುದ್ಕೋಳಿ ಇವರನ್ನು ಅಭಿನಂದಿಸಲಾಗುವುದು.
ಕಾರ್ಯಕ್ರಮ ಬೆಳಗ್ಗೆ 7 ರಿಂದ ಭಜನೆ, ಬೆಳಗ್ಗೆ 10 ರಿಂದ ಗುರುಪೂಜೆ, 10.30ಕ್ಕೆ ಮಹಾಪೂಜೆ, 11ರಿಂದ ಸಭಾ ಕಾರ್ಯಕ್ರಮ, ಸಮ್ಮಾನ ಸಮಾರಂಭ, ಅಭಿನಂದನೆ ಕಾರ್ಯಕ್ರಮ, ಮಧ್ಯಾಹ್ನ 1.30ರಿಂದ ಅನ್ನಸಂತರ್ಪಣೆ, ಮಧ್ಯಾಹ್ನ ಗಂಟೆ 2 ರಿಂದ ಬಂಟ್ವಾಳ ತಾಲೂಕು ಬಿಲ್ಲವ ಮಹಿಳಾ ಸಮಿತಿ ಮತ್ತು ಯುವವಾಹಿನಿ (ರಿ.) ಬಂಟ್ವಾಳ ತಾಲೂಕು ಘಟಕ ಇವರ ಸಹಯೋಗದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.