ಬಂಟ್ವಾಳ: ಸರಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಣೇಜ ಶಾಂತಿಗುರಿ ಎಂಬಲ್ಲಿ ರಾಮ ಕುಲಾಲ ಎಂಬವರ ಮನೆಯ ಮುಂಭಾಗದ ಗುಡ್ಡ ಕುಸಿದು ಬಿದ್ದು ಮೂರು ತಿಂಗಳು ಕಳೆದರೂ ಮಣ್ಣನ್ನು ಸಂಬಂಧಪಟ್ಟ ಇಲಾಖೆ ತೆರವುಗೊಳಿಸಿಲ್ಲ ಎಂದು ಆರೋಪ ವ್ಯಕ್ತವಾಗಿದೆ. ಕಳೆದ ಎರಡು ದಿನಗಳ ಹಿಂದೆ ಸುರಿದ ಧಾರಾಕಾರ ಮಳೆಗೆ ಮತ್ತೆ ಇಲ್ಲಿ ಗುಡ್ಡ ಕುಸಿದು ಬಿದ್ದಿರುವುದರಿಂದ ಇವರಿಗೆ ಇಲ್ಲಿ ವಾಸ ಮಾಡಲು ಆತಂಕ ಉಂಟಾಗಿದೆ. ಕಳೆದ ಮೂರು ತಿಂಗಳಿಂದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಇವರ ಕುಟುಂಬ ಕಳೆದ ಒಂದು ವಾರದಿಂದ ತಮ್ಮ ಮನೆಯಲ್ಲಿ ವಾಸಿಸುತ್ತಿದೆ. ರಾತ್ರಿ ಧಾರಾಕಾರ ಸುರಿಯುತ್ತಿರುವ ಮಳೆಯಿಂದಾಗಿ ರಾತ್ರಿ ಇಡೀ ನಿದ್ದೆ ಕಳೆದು ಜೀವ ಭಯದಿಂದಿರುವಾಗಲೇ ಗುಡ್ಡದ ಒಂದು ಭಾಗ ಕುಸಿದು ಬಿದ್ದು ದೊಡ್ಡ ಗಾತ್ರದ ಕಲ್ಲುಗಳು ಮನೆ ಅಂಗಳದಲ್ಲಿ ಬಿದ್ದಿವೆ. ಆದ್ದರಿಂದ ಕೂಡಲೇ ಸಂಬಂಧಪಟ್ಟ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ವ್ಯಕ್ತವಾಗಿದೆ.