ವಿಟ್ಲ: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ 2022-23 ನೇ ಸಾಲಿನ ‘ಕರ್ನಾಟಕ ಕಲಾಶ್ರೀ’ ಗೌರವ ಹಾಗೂ ವಾರ್ಷಿಕ ಪ್ರಶಸ್ತಿ ಪ್ರಕಟವಾಗಿದ್ದು, ಮೂವರು ವಿಶೇಷ ಚೇತನರು ಸೇರಿದಂತೆ 18 ಕಲಾವಿದರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ವಿಟ್ಲ ಮೂಲದ ಖ್ಯಾತ ಸ್ಯಾಕ್ಸೋಫೋನ್ ವಾದಕರಾದ ‘ಪಿ.ಕೆ. ದಾಮೋದರ ರವರು ಈ ಬಾರಿಯ ‘ಕರ್ನಾಟಕ ಕಲಾಶ್ರೀ’ ಗೌರವ, ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ದಾಮೋದರ ಅವರು ಕೃಷ್ಣ ಪುರುಷ ಮತ್ತು ಸುನಂದಾ ದಂಪತಿಯ ಪುತ್ರರಾಗಿದ್ದು, ಬಾಲ್ಯದಿಂದಲೇ ಸ್ಯಾಕ್ಸೋಫೋನ್ ವಾದನದಲ್ಲಿ ಆಸಕ್ತಿ ಹೊಂದಿದ್ದರು. ಇವರ ತಂದೆ ಕೂಡ ಸ್ಯಾಕ್ಸೋಫೋನ್ ವಾದಕರಾಗಿದ್ದು, ತಂದೆಯೇ ಇವರ ಮೊದಲ ಗುರುಗಳಾಗಿದ್ದಾರೆ.
ನಂತರದ ದಿನಗಳಲ್ಲಿ ಹಲವು ವಿದ್ವಾನ್‌ಗಳ ಬಳಿ ಸಂಗೀತ ಅಭ್ಯಾಸ ಮಾಡಿದ ದಾಮೋದರ ಅವರು ಇದೀಗ ಉತ್ತಮ ಸ್ಯಾಕ್ಸೋಫೋನ್ ವಾದಕರಾಗಿ ಖ್ಯಾತಿಗಳಿಸಿದ್ದು, ನೂರಾರು ಶಿಷ್ಯ ವೃಂದವನ್ನು ಹೊಂದಿದ್ದಾರೆ. ಈಗಾಗಲೇ ನಾದ ವಿಶಾರದೆ, ಕಲಾರತ್ನ, ನಾದಕೇಸರಿ, ರತ್ನ ಪ್ರಶಸ್ತಿ, ಗೌರವ ಡಾಕ್ಟರೇಟ್, ಕರ್ನಾಟಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರಿಗೆ ಲಭಿಸಿದೆ.
ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರುಗಲಿದ್ದು, ಅದಕ್ಕೂ ಮೊದಲು ಸೆ.16 ರಿಂದ ಎರಡು ದಿನಗಳ ಕಾಲ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟ್ಯ ನವೋದಯ ನೃತ್ಯ ಸಂಯೋಜನಾ ಉತ್ಸವ ಏರ್ಪಡಿಸಲಾಗಿದೆ.