ಬೆಂಗಳೂರು: ಮತದಾರರು ವೋಟರ್ ಐಡಿಗೆ ಆಧಾರ್ ನಂಬರ್ ಲಿಂಕ್ ಮಾಡಿಸುವುದು ಕಡ್ಡಾಯವಲ್ಲ ಎಂದು ರಾಜ್ಯ ಚುನಾವಣಾ ಆಯೋಗ ಹೇಳಿದೆ. ಈ ಸಂಬಂಧ ಆ. 22ರಂದು ಮಾಧ್ಯಮ ಪ್ರಕಟಣೆ ಹೊರಡಿಸಿದ ಚುನಾವಣೆ ಆಯೋಗ ಮತದಾರರು ಮತದಾರರ ಪಟ್ಟಿಯ ದತ್ತಾಂಶದೊಂದಿಗೆ ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯವಲ್ಲ. ಮತದಾರರು ಸ್ವಯಂ ಪ್ರೇರಿತರಾಗಿ ಆಧಾರ್ ಅಥವಾ ಇತರೆ ನಿಗದಿತ ದಾಖಲೆಗಳ ಮೂಲಕವೂ ದೃಢೀಕರಿಸಿ ಜೋಡಣೆ ಮಾಡಬಹುದಾಗಿದೆ ಎಂದು ತಿಳಿಸಿದೆ.
ಆಗಸ್ಟ್ 9 ರಂದು ರಾಜ್ಯದ ಎಲ್ಲ ಮತದಾರರು ತಮ್ಮ ಮತದಾನ ಗುರುತಿನ ಚೀಟಿ ಸಂಖ್ಯೆಗೆ ಕೂಡಲೇ ಆಧಾರ್ ನಂಬರ್ನ್ನು ಲಿಂಕ್ ಮಾಡಿಕೊಳ್ಳಬೇಕೆಂದು ಚುನಾವಣಾ ಆಯೋಗ ಸೂಚಿಸಿದೆ ಎಂದು ಕಂದಾಯ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಸುತ್ತೋಲೆಯಲ್ಲಿ “ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ರಾಜ್ಯದ ಎಲ್ಲಾ ಮತದಾರರ ಗುರುತಿನ ಚೀಟಿ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಲು ನಿರ್ಧರಿಸಿದ್ದು, ಎಲ್ಲಾ ಮತದಾರರು ತಮ್ಮ ಹಾಗೂ ತಮ್ಮ ಕುಟುಂಬದ ಎಲ್ಲಾ ಸದಸ್ಯರ ಮತ್ತು ನಿಮ್ಮ ಸ್ನೇಹಿತರ ಮತದಾರರ ಗುರುತಿನ ಚೀಟಿ ಸಂಖ್ಯೆಗೆ ಕೂಡಲೇ ಆಧಾರ್ ನಂಬರನ್ನು ಲಿಂಕ್ ಮಾಡಿಕೊಳ್ಳಲು ಕೋರಿದೆ ಎಂದು”, ಕಂದಾಯ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿತ್ತು.