ಬಂಟ್ವಾಳ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಕಳಕೊಂಡಿದ್ದ 20 ಸಾವಿರ ಹಣವನ್ನು ಅದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಇನ್ನೋರ್ವ ಪ್ರಯಾಣಿಕ ಮರಳಿಸುವ ಮೂಲಕ ಮಾನವೀಯತೆ ಮೆರೆದ ಘಟನೆ ವರದಿಯಾಗಿದೆ.
ಮೂಡಬಿದಿರೆ ತಾಕೋಡೆ ನಿವಾಸಿ ವೆಂಕಪ್ಪ ಹಣವನ್ನು ಕಳಕೊಂಡವರು. ಅವರು ತನ್ನ ಮಗಳ ಮನೆಗೆ ಹೋಗಲೆಂದು ರಾಯಿ ಸಮೀಪದ ಕುದ್ಕೋಳಿಯಿಂದ ಖಾಸಗಿ ಬಸ್ಸಿನಲ್ಲಿ ನೇರಳಕಟ್ಟೆಗೆ ಪ್ರಯಾಣಿಸಿದ್ದರು. ಈ ಸಂದರ್ಭ ಚಿಕಿತ್ಸೆಗೆಂದು ಇರಿಸಿಕೊಂಡಿದ್ದ 20 ಸಾವಿರ ರೂ. ನಗದು ಸಹಿತ ಔಷಧಿಗಳಿದ್ದ ಪ್ಲಾಸ್ಟಿಕ್ ಚೀಲವನ್ನು ಬಸ್ಸಿನಲ್ಲಿ ಕಳಕೊಂಡಿದ್ದರು. ನೇರಳಕಟ್ಟೆಯಿಂದ ಬಸ್ ಮುಂದೆ ಹೋದ ಬಳಿಕ ಹಣ ಕಳಕೊಂಡಿರುವುದನ್ನು ಗಮನಿಸಿದ ವೆಂಕಪ್ಪ ಅವರು ಆತಂಕಕ್ಕೀಡಾದರು. ಬಸ್ ಪುಂಜಾಲಕಟ್ಟೆಗೆ ಹೋಗಿ ವಾಪಸ್ಸು ನೇರಳಕಟ್ಟೆಗೆ ಬರುವ ಸಂದರ್ಭ ಬಸ್ಸಿಗೆ ಹತ್ತಿದ್ದ ಇನ್ನೋರ್ವ ಪ್ರಯಾಣಿಕ ಅವರಿಗೆ ಬಸ್ಸಿನ ಸೀಟಿನ ಅಡಿಭಾಗದಲ್ಲಿ ಈ ಹಣ ಸಿಕ್ಕಿದ್ದು ಅವರು ಅದನ್ನು ಬಸ್ಸಿನ ನಿರ್ವಾಹಕರಲ್ಲಿ ನೀಡಿದ್ದರು. ಬಸ್ ವಾಪಸ್ಸು ನೇರಳಕಟ್ಟೆಗೆ ಬಂದಾಗ ಬಸ್ಸುನಿಲ್ದಾಣದಲ್ಲಿ ಹಣವಿಲ್ಲದೆ ಕಂಗಲಾಗಿ ಸ್ಥಳೀಯ ರಿಕ್ಷಾ ಚಾಲಕರಲ್ಲಿ ವಿಚಾರಿಸುತ್ತಿದ್ದ ವೆಂಕಪ್ಪ ಅವರಿಗೆ ಕಿರಣ್ ಹಾಗೂ ಬಸ್ಸಿನ ಚಾಲಕ ನಿರ್ವಾಹಕರು ತಮಗೆ ಸಿಕ್ಕಿದ ಹಣವನ್ನು ಮರಳಿಸಿದ್ದಾರೆ. ಕಳಕೊಂಡ ಹಣ ಸಿಕ್ಕ ಸಂತೋಷದಲ್ಲಿ ವೃದ್ದ ವೆಂಕಪ್ಪನವರು ಕಿರಣ್ ಹಾಗೂ ಬಸ್ ಸಿಬ್ಬಂದಿಗಳಿಗೆ ಕೃತಜ್ಞತೆ ಸಲ್ಲಿಸಿದರು.








