ಬಂಟ್ವಾಳ: ರಾಷ್ಟ್ರದ ಏಕತೆ, ಸಮಗ್ರತೆ ಮತ್ತು ಸಾಮರಸ್ಯವನ್ನು ಕಾಪಾಡುವ ಉದ್ದೇಶದಿಂದ ಮೆಲ್ಕಾರ್ ಮಹಿಳಾ ಪದವಿ ಪೂರ್ವ ಮತ್ತು ಪದವಿ ಕಾಲೇಜಿನಲ್ಲಿ ಸದ್ಭಾವನಾ ದಿನವನ್ನು ಆಚರಿಸಲಾಯಿತು.
ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಅವರ ಜನ್ಮದಿನದ ಅಂಗವಾಗಿ ಪ್ರತಿ ವರ್ಷ ಆಗಸ್ಟ್ 20 ರಂದು ಸದ್ಭಾವನಾ ದಿನವನ್ನು ಆಚರಿಸಲಾಗುತ್ತದೆ. ಕಾರ್ಯಕ್ರಮವನ್ನು ಕಾಲೇಜಿನ ಉಪ ಪ್ರಾಂಶುಪಾಲರಾದ ಅಂಜಲಿನ ಸುನಿತಾ ಪಿರೇರ ಉದ್ಘಾಟಿಸಿ ಮಾತನಾಡಿ, ವಿಭಿನ್ನ ಜಾತಿ, ಧರ್ಮ, ಭಾಷೆಗಳ ನಡುವೆ ಪ್ರೀತಿ, ವಿಶ್ವಾಸ ಮತ್ತು ಸೌಹಾರ್ದತೆ ಬೆಳೆಸುವುದೇ ಸದ್ಭಾವನೆಯ ನಿಜವಾದ ಅರ್ಥ. ಯುವಕ -ಯುವತಿಯರೇ ದೇಶದ ಭವಿಷ್ಯ. ನೀವು ಸದ್ಭಾವನೆಯ ಸಂದೇಶವನ್ನು ಮನೆ-ಮನೆಗೆ ತಲುಪಿಸಬೇಕು ಎಂದು ಕರೆ ನೀಡಿದರು. ಎಲ್ಲಾ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರು ಕಾಲೇಜಿನ ಆವರಣದಲ್ಲಿ ಸಭೆ ಸೇರಿ ಸದ್ಭಾವನಾ ಪ್ರತಿಜ್ಞೆಯನ್ನು ಸಾಮೂಹಿಕವಾಗಿ ಸ್ವೀಕರಿಸಿದರು.
ಉಪನ್ಯಾಸಕಿ ಅಶ್ವಿತಾ ಪ್ರತಿಜ್ಞೆ ಬೋಧಿಸಿದರು. ಉಪನ್ಯಾಸಕಿ ಸೌಮ್ಯ ನಿರೂಪಿಸಿದರು. ಗಾಯತ್ರಿ ವಂದನಾರ್ಪಣೆ ಸಲ್ಲಿಸಿದರು.








