ಬಂಟ್ವಾಳ: ನೀಟ್ ಪೇಪರ್ ಸೋರಿಕೆ ಹೆಸರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ನಕಲಿ ವಿದ್ಯಾರ್ಥಿಗಳನ್ನು ಬಳಸಲಾಗುತ್ತಿದೆ ಎಂದು ಬಂಟ್ವಾಳ ತಾ.ಪಂ ಮಾಜಿ ಸದಸ್ಯ ಪ್ರಭಾಕರ ಪ್ರಭು ಆರೋಪಿಸಿದರು.
ಇದು ಸಾರ್ವಜನಿಕ ಆಸ್ತಿ ಹಾನಿ ಮತ್ತು ಪೊಲೀಸರ ಮೇಲೆ ಹಲ್ಲೆಗೆ ಕಾರಣವಾಗಿದ್ದು, ರಾಷ್ಟ್ರವಿರೋಧಿ ಶಕ್ತಿಗಳ ಕುತಂತ್ರವಾಗಿದೆ. ಕಾಕ್ರೋಚ್ ಜನತಾ ಪಾರ್ಟಿಯ ಈ ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ ಎಂದು ಅವರು ಹೇಳಿದರು.ಅಸಲಿ ವಿದ್ಯಾರ್ಥಿಗಳು ಜಾಗೃತರಾಗಿ “ಜಿರಳೆಗಳ” ಪ್ರತಿಭಟನೆಯನ್ನು ತಡೆಯಬೇಕು ಎಂದು ಅವರು ವಿದ್ಯಾರ್ಥಿ ಸಂಘಟನೆಗಳಿಗೆ ಕರೆ ನೀಡಿದರು.
ನೀಟ್ ವಿಷಯದ ಹೆಸರಿನಲ್ಲಿ ರಾಷ್ಟ್ರ ವಿರೋಧಿ ಶಕ್ತಿಗಳೊಂದಿಗೆ ಸೇರಿ ಕೆಲವರು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುತ್ತಿರುವುದು ಮತ್ತು ಪೋಲಿಸರ ಮೇಲೆ ಹಲ್ಲೆ ನಡೆಸುತ್ತಿರುವುದು ದೇಶದ ನೈಜ ರಾಷ್ಟ್ರಪ್ರೇಮಿ ವಿದ್ಯಾರ್ಥಿಗಳ ಗೌರವಕ್ಕೆ ಚ್ಯುತಿ ತರುತ್ತದೆ. ಇದು ಶಾಂತಿಯನ್ನು ಕದಡಿಸಿ ಅರಾಜಕತೆ ಸೃಷ್ಟಿಸುವ ಹುನ್ನಾರವಾಗಿದೆ ಎಂದು ಆರೋಪಿಸಿದರು.”ತ್ರಿವಳಿ ತಲಾಕ್ ನಿಷೇಧ ರದ್ದು, ಎನ್.ಆರ್.ಸಿ, ಸಿ.ಎ.ಎ, ನೋಟ್ ಬ್ಯಾನ್ ವಿರುದ್ಧ ಘೋಷಣೆ ಕೂಗುವುದರಿಂದ ಪ್ರತಿಭಟನೆಗಾರರ ಅಸಲಿ ಮುಖ ಬಹಿರಂಗವಾಗಿದೆ. ಕಾಕ್ರೋಚ್ ಜನತಾ ಪಾರ್ಟಿ ನಡೆಸುತ್ತಿರುವ ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷ ನೇರವಾಗಿ ಭಾಗಿಯಾಗಿ ಪ್ರತಿಭಟನೆಯ ಸ್ವರೂಪವನ್ನು ಬದಲಾಯಿಸಿ ಜನರ ದಿಕ್ಕು ತಪ್ಪಿಸುತ್ತಿದೆ” ಎಂದು ಅವರು ಹೇಳಿದರು.
“ಆರ್.ಎಸ್.ಎಸ್ ಸಂಘಟನೆಗೆ ಹಣ ಎಲ್ಲಿಂದ ಬರುತ್ತದೆ ಎಂದು ಕೇಳುವವರು, ಇತ್ತೀಚೆಗೆ ಹುಟ್ಟಿದ ಈ ಪ್ರತಿಭಟನಾಕಾರರಿಗೆ ಹಣ ಎಲ್ಲಿಂದ ಬರುತ್ತದೆ ಎಂದು ಯಾಕೆ ಕೇಳುವುದಿಲ್ಲ” ಎಂದು ಪ್ರಶ್ನಿಸಿದ ಅವರು, ನಕಲಿ ವಿದ್ಯಾರ್ಥಿಗಳ ಮತ್ತು “ಜಿರಳೆಗಳ” ಪ್ರತಿಭಟನೆಯನ್ನು ಅಸಲಿ ವಿದ್ಯಾರ್ಥಿಗಳು ಬೆಕ್ಕಿನಂತೆ ಅಟ್ಟಹಾಸವನ್ನು ಅಡಗಿಸಬೇಕು ಎಂದು ಅವರು ಹೇಳಿದರು.








