ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ ಬಂಟ್ವಾಳ ತಾಲೂಕು 2026-27ನೇ ಸಾಲಿನ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಯೋಜನೆಯಡಿ ರೈತರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಕಾವಳ ಮೂಡೂರು ಗ್ರಾಮದ ಕೊಡಮಣಿತ್ತಾಯ ದೈವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾವಳ ಮುಡೂರು ಪ್ರಾಥಮಿಕ ಕೃಷಿ ಪರಿಷತ್ತಿನ ಸಹಕಾರಿ ಸಂಘದ ಅಧ್ಯಕ್ಷರು, ಬಂಟ್ವಾಳ ಕೃಷಿಕ ಸಮಾಜದ ಸದಸ್ಯರಾದ ಪದ್ಮಶೇಖರ್ ಜೈನ್ ವಹಿಸಿ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ನೈಸರ್ಗಿಕ ಕೃಷಿಯ ಮಹತ್ವದ ಕುರಿತು ಮತ್ತು ರಾಷ್ಟ್ರೀಯ ನೈಸರ್ಗಿಕ ಅಭಿಯಾನಕ್ಕೆ ಹೊಸದಾಗಿ ಸೇರ್ಪಡೆಯಾದ ಬಂಟ್ವಾಳ ಹೋಬಳಿ ಕಾವಳಮುಡೂರು ಗ್ರಾಮದ ಗುಚ್ಛದ ಕುರಿತು ಬಂಟ್ವಾಳ ತಾಲೂಕಿನ ತಾಂತ್ರಿಕ ಕೃಷಿ ಅಧಿಕಾರಿಯಾದ ನಂದನ್ ಶೆಣೈಯವರು ಪ್ರಸ್ತಾಪಿಸಿದರು.
ಮಣ್ಣಿನ ಆರೋಗ್ಯ ಮತ್ತು ಬೆಳೆ ಉತ್ಪಾದನೆಯ ಬಗ್ಗೆ ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಬೇಸಾಯ ಶಾಸ್ತ್ರ ವಿಜ್ಞಾನಿ ಡಾ.ಹರೀಶ್ ಶೆಣೈ ಮಾಹಿತಿ ನೀಡಿದರು. ಸಾವಯವ ಹಾಗೂ ಸುಸ್ಥಿರ ಕೃಷಿ ಕುರಿತು ಹಾಗೂ ತೋಟಗಾರಿಕಾ ಕೃಷಿ ಬಗ್ಗೆ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ರೋಗಶಾಸ್ತ್ರ ವಿಜ್ಞಾನಿ ಡಾ.ಕೇದಾರನಾಥ ಮಾಹಿತಿ ನೀಡಿದರು. ಕೃಷಿ ಇಲಾಖೆ ಸೌಲಭ್ಯದ ಬಗ್ಗೆ ತಾಂತ್ರಿಕ ಸಹಾಯಕರಾದ ಹನುಮಂತ ಕಾಳಗಿ ಮಾಹಿತಿ ನೀಡಿದರು. 2026-27 ನೇ ಸಾಲಿನ ರೈತ ಬೆಳೆ ಸಮೀಕ್ಷೆ ಕುರಿತು ಬಂಟ್ವಾಳ ಹೋಬಳಿಯ ತಾಂತ್ರಿಕ ಸಹಾಯಕಿ ಚಂದ್ರಕಲಾ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಕಾವಳ ಮೂಡೂರು ಕೃಷಿ ಪರಿಷತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ದಯಾನಂದ ಶೆಟ್ಟಿ, ಬಂಟ್ವಾಳ ತಾಲೂಕು ಎನ್ ಆರ್ ಎಲ್ ಎಂ ತಾಲೂಕು ಮೇಲ್ವಿಚಾರಕಿ ದೀಕ್ಷಿತ ಕರ್ಕೇರಾ, ಕಾವಳಮೂಡುರು ಗ್ರಾಮ ಪಂಚಾಯತ್ ಕಾರ್ಯದರ್ಶಿ ಉಷಾರಾಣಿ, ಬಂಟ್ವಾಳ ತಾಲೂಕು ಆತ್ಮ ಯೋಜನೆಯ ಬಿಟಿಎಂ ಸ್ನೇಹ, ಕಾವಳಮೂಡೂರು ಕೃಷಿ ಪರಿಷತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಸೀಬ ಬಾನು ಉಪಸ್ಥಿತರಿದ್ದರು.
ಸಂಪೂರ್ಣ ಪ್ರಾರ್ಥಿಸಿದರು. ನಸೀಬ ಬಾನು ಸ್ವಾಗತಿಸಿ, ಸ್ನೇಹ ವಂದಿಸಿದರು. ಕಾವಳ ಮೂಡುರು ರಾಷ್ಟ್ರೀಯ ನೈಸರ್ಗಿಕ ಕೃಷಿ ಯೋಜನೆಯ ಗುಚ್ಚ ಸಂಪನ್ಮೂಲ ವ್ಯಕ್ತಿಗಳಾದ ಸುಲೋಚನಾ ಮತ್ತು ಸೌಮ್ಯ ಉಪಸ್ಥಿತರಿದ್ದು, 140 ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿ ಪಡಕೊಂಡರು. ಜೀವಾಮೃತ ಹಾಗೂ ಅಗ್ನಿ ಅಸ್ತ್ರ ಜೈವಿಕ ಪರಿಕರ ತಯಾರಿ ಕುರಿತು ಪ್ರಾತ್ಯಕ್ಷಿಕೆ ಜರುಗಿತು.








