ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ

0

ಮದ್ಯವಿಲ್ಲದ ಮನೆಯಲ್ಲಿ ಪ್ರೀತಿ ಹೆಚ್ಚುತ್ತದೆ: ವಿವೇಕ್ ವಿನ್ಸೆಂಟ್ ಪಾಯಸ್

ಬಂಟ್ವಾಳ: ಮದ್ಯಪಾನವನ್ನು ತ್ಯಜಿಸುವುದು ಎಂದರೆ ಕೇವಲ ಒಂದು ಕೆಟ್ಟ ಅಭ್ಯಾಸವನ್ನು ಬಿಡುವುದಲ್ಲ; ಅದು ಕುಟುಂಬದ ಮೇಲಿನ ಪ್ರೀತಿ, ಜವಾಬ್ದಾರಿ ಮತ್ತು ಕಾಳಜಿಯನ್ನು ವ್ಯಕ್ತಪಡಿಸುವ ಮಹತ್ವದ ನಿರ್ಧಾರವಾಗಿದೆ. ಮದ್ಯವಿಲ್ಲದ ಮನೆಯಲ್ಲಿ ಪ್ರೀತಿ ಹೆಚ್ಚುತ್ತದೆ, ಆರೋಗ್ಯ ಸುಧಾರಿಸುತ್ತದೆ, ಮಕ್ಕಳಿಗೆ ಉತ್ತಮ ವಾತಾವರಣ ದೊರೆಯುತ್ತದೆ ಮತ್ತು ಕುಟುಂಬದಲ್ಲಿ ಸಂತೋಷ ನೆಲೆಸುತ್ತದೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್‌ ಪಾಯಸ್ ಹೇಳಿದರು.


ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ವಾಮದಪದವು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಇತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ವಾಮದಪದವು ಬಸ್ತಿಕೋಡಿಯ ಪದ್ಮಾವತಿ ಸಭಾಭವನದಲ್ಲಿ ನಡೆದ 2076ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದ ವೇಳೆ ನಡೆದ ಕುಟುಂಬ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ವ್ಯವಸ್ಥಾಪನ ಸಮಿತಿಯ ಗೌರವಾಧ್ಯಕ್ಷ ಹರೀಂದ್ರ ಪೈ ಮಾತನಾಡಿ ಶಿಬಿರಾರ್ಥಿಗಳು ಉತ್ತಮ ಗುಣವನ್ನು ಅಳವಡಿಸಿಕೊಂಡು ಉತ್ತಮ‌ ಜೀವನವನ್ನು ನಡೆಸುವಂತೆ ತಿಳಿಸಿದರು. ‌
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ‌ದಿನೇಶ್ ಡಿ ಮಾತನಾಡಿ‌ 63 ಮಂದಿಗೆ ಶಿಬಿರಾರ್ಥಿಗಳಿಗೆ ಹೊಸ ಬದುಕು ಸಿಕ್ಕಿದೆ. ಶಿಬಿರದ ಮೂಲಕ ಜೀವನದಲ್ಲಿ ಒಂದು ತಿರುವು ಸಿಕ್ಕಿದ್ದು ಜೀವನದ ಪರಿವರ್ತನೆಗೆ ಅವಕಾಶವಾಗಲಿದೆ ಎಂದರು. ಜನಜಾಗೃತಿ ವೇದಿಕೆಯ ಅಧ್ಯಕ್ಷ ರೋನಾಲ್ಡ್ ಡಿಸೋಜಾ ಮಾತನಾಡಿ ಸಮಾಜದಲ್ಲಿ ಯಾರೂ ಕೆಟ್ಟವರಿಲ್ಲ.‌ ಕೆಲವೊಂದು ಸಂದರ್ಭಗಳು ವ್ಯಸನಿಗಳನ್ನಾಗಿ ಮಾಡುತ್ತದೆ.‌ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ಧರ್ಮಾಧಿಕಾರಿಗಳಿಗೆ ನಾವೆಲ್ಲರೂ ಕೃತಜ್ಞರಾಗಿರಬೇಕು ಎಂದು ತಿಳಿಸಿದರು.


ಶಿಬಿರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್ ಪಂಜಿಕಲ್ಲು, ವ್ಯವಸ್ಥಾಪನಾ ಸಮಿತಿಯ ಪದಾಧಿಕಾರಿಗಳಾದ ಅಮ್ಮು ರೈ ಅರ್ಕಾಡಿ, ಸದಾನಂದ ನಾವೂರು, ಅರ್ಕಕೀರ್ತಿ ಇಂದ್ರ,‌ ಗಣೇಶ್ ಪ್ರಭು ಪ್ರಕಾಶ್ ಗಟ್ಟಿ, ಯತೀಶ್ , ಸದಾನಂದ‌ ಶೀತಲ್, ಪ್ರವೀಣ್ ಕಾಡಬೆಟ್ಟು, ಶೇಖರ್ ಸಾಮಾನಿ, ಶೌರ್ಯ ತಂಡದ ಕ್ಯಾಪ್ಟನ್ ಪ್ರಕಾಶ್, ಪರಮೇಶ್ವರ, ಶಶಿಧರ ಆಚಾರ್ಯ, ಭಾರತಿ ಚೌಟ, ಡಾ. ರಾಮಕೃಷ್ಣ, ಶಿಬಿರಾಧಿಕಾರಿ ರಮೇಶ್ ಉಪಸ್ಥಿತರಿದ್ದರು.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ತಾಲೂಕು ಯೋಜನಾಧಿಕಾರಿ ಜಯಾನಂದ‌‌ ಸ್ವಾಗತಿಸಿದರು. ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು. ಮಹೇಶ್, ಶ್ರವಣ್ ಅನಿಸಿಕೆ ವ್ಯಕ್ತ ಪಡಿಸಿದರು. ಮದ್ಯವರ್ಜನ ಶಿಬಿರದಲ್ಲಿ 63 ಜನ ಪಾನಮುಕ್ತರಾಗಿ ಹೊಸ ಜೀವನಕ್ಕೆ ಕಾಲಿಟ್ಟರು.

ನಿಮ್ಮೂರಿನ ಯಾವುದೇ ಸುದ್ದಿ, ಮಾಹಿತಿಗಳಿದ್ದಲ್ಲಿ ಸಂಪರ್ಕಿಸಿ: +9190351 37252

LEAVE A REPLY

Please enter your comment!
Please enter your name here