ವಗ್ಗ: ಸರ್ಕಾರಿ ಪದವಿಪೂರ್ವ ಕಾಲೇಜು ವಗ್ಗ, ಪ್ರೌಢಶಾಲಾ ವಿಭಾಗದಲ್ಲಿ ತೇಜಸ್ವಿ ಸಾಹಿತ್ಯ ಸಂಘದ ವತಿಯಿಂದ ‘ದಿನ ದಿನ ಓದಿನ ದಿನ’ ಎಂಬ ಪರಿಕಲ್ಪನೆಯಡಿ ವಿದ್ಯಾರ್ಥಿಗಳಿಗೆ ಓದಿನ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಶ್ರೀ ನಾದ ಮಣಿನಾಲ್ಕೂರು ಅವರು ವಿದ್ಯಾರ್ಥಿಗಳಲ್ಲಿ ಓದುವ ಕೌಶಲವನ್ನು ಬೆಳೆಸಲು ಹಲವು ಚಟುವಟಿಕೆಗಳನ್ನು ನಡೆಸಿಕೊಟ್ಟರು. ಎರಡು ಪದಗಳ, ಮೂರು ಪದಗಳ ಪದಪುಂಜಗಳನ್ನು ತಕ್ಷಣ ಹೇಳುವಂತಹ ಹಲವು ತಂತ್ರಗಾರಿಕೆಗಳನ್ನು ಚಟುವಟಿಕೆ ಮೂಲಕ ಕಲಿಸಿದರು.
‘ಓದು, ಮನನ ಮತ್ತು ಬರಹ – ಈ ಮೂರು ಹಂತಗಳು ನಮ್ಮ ಸಾಹಿತ್ಯ ಬಂಡಾರವನ್ನು ಪ್ರಬುದ್ಧಗೊಳಿಸುತ್ತವೆ’ ಎಂದು ತಿಳಿಸಿದ ಅವರು, ವಿದ್ಯಾರ್ಥಿಗಳ ಗುಂಪು ರಚಿಸಿ ಏಕಾಗ್ರತೆಯಿಂದ ಓದುವುದು, ಚಿತ್ರಗಳನ್ನು ನೋಡಿ ಕಥೆ ರಚಿಸುವುದು ಮತ್ತು ಅದನ್ನು ಪ್ರಸ್ತುತಪಡಿಸುವ ಚಟುವಟಿಕೆಗಳನ್ನು ನಡೆಸಿದರು. ಐದು ತಂಡಗಳ ವಿದ್ಯಾರ್ಥಿಗಳು ಚಿತ್ರಪಟಗಳನ್ನು ನೋಡಿ ತಮ್ಮದೇ ಶೈಲಿಯಲ್ಲಿ ಅದ್ಭುತವಾದ ಕಥೆಗಳನ್ನು ರಚಿಸಿ ಬಹಳ ಉತ್ತಮವಾಗಿ ಪ್ರಸ್ತುತಪಡಿಸಿದರು. ಇದೇ ವೇಳೆ ಹಲವು ಪುಸ್ತಕಗಳ ಪರಿಚಯ, ಅವುಗಳ ಮಹತ್ವ, ಕಥೆ, ಕವನ, ಹಾಡು ಮತ್ತು ಸ್ಪಷ್ಟ ಉಚ್ಚಾರಣಾ ವಿಧಾನಗಳನ್ನು ತಿಳಿಸಿಕೊಟ್ಟರು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗುವ ಈ ಕಾರ್ಯಕ್ರಮವನ್ನು ಶಾಲೆಯ ಮುಖ್ಯ ಶಿಕ್ಷಕ ಶೇಖ್ ಅದಂ ಸಾಹೇಬ್ ನೆಲ್ಯಾಡಿ ಅವರ ಮಾರ್ಗದರ್ಶನದಲ್ಲಿ, ಕನ್ನಡ ಅಧ್ಯಾಪಕಿ ಲೈಲಾ ಪರ್ವಿನ್ ಅವರ ಸಂಯೋಜನೆಯಲ್ಲಿ ವಿಭಿನ್ನವಾಗಿ ಆಯೋಜಿಸಲಾಗಿತ್ತು.








