ಒತ್ತಡರಹಿತ ಶಿಕ್ಷಣದಿಂದ ಮೌಲ್ಯ ಉಳಿಯುತ್ತದೆ: ಸಿಇಒ ಸಚಿನ್ ಕುಮಾರ್
ಬಂಟ್ವಾಳ: ಪ್ರತಿಯೊಬ್ಬನಲ್ಲಿಯೂ ವಿಭಿನ್ನ ಕೌಶಲಗಳಿರುತ್ತವೆ. ಆತನ ಪ್ರತಿಭೆಯನ್ನು ಗುರುತಿಸುವುದು ಪೋಷಕರ ಮತ್ತು ಶಿಕ್ಷಕರ ಜವಾಬ್ದಾರಿ. ಒತ್ತಡರಹಿತ ಶಿಕ್ಷಣದಿಂದ ಶಿಕ್ಷಣದ ಮೌಲ್ಯ ಉಳಿಯುತ್ತದೆ ಎಂದು ಬಂಟ್ವಾಳ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ಹೇಳಿದರು.

ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ಶಂಭೂರಿನಲ್ಲಿ ನಡೆದ ಶಾಲಾ ಆರಂಭೋತ್ಸವದಲ್ಲಿ ವಿದ್ಯಾರ್ಥಿಗಳನ್ನು ಸ್ವಾಗತಿಸಿ ಅವರು ಮಾತನಾಡಿದರು.ಶಾಲೆಗೆ ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳನ್ನು ಬ್ಯಾಂಡ್ ವಾದನದೊಂದಿಗೆ ಆರತಿ ಬೆಳಗಿ ಪುಷ್ಪವೃಷ್ಟಿಯೊಂದಿಗೆ ಸ್ವಾಗತಿಸಲಾಯಿತು. ಸರಕಾರದಿಂದ ಪೂರೈಕೆಯಾದ ಪಠ್ಯಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಮಾತನಾಡಿ, ಗುಣಾತ್ಮಕ ಶಿಕ್ಷಣದೊಂದಿಗೆ ಶಿಸ್ತು, ಸಂಸ್ಕಾರಕ್ಕೆ ಪ್ರಾಧಾನ್ಯತೆ ನೀಡಬೇಕಾಗಿದೆ ಎಂದರು. ಬಾಳ್ತಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸುರಕ್ಷಾಧಿಕಾರಿ ರಶೀದಾ ಆರೋಗ್ಯ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಗಣೇಶ್, ವೀಣಾ, ಶ್ರಾವಣಿ, ಜಯಂತಿ, ದುರ್ಗಾಪರಮೇಶ್ವರಿ ಮಹಿಳಾ ಮಂಡಳಿ ಅಧ್ಯಕ್ಷೆ ಕಲಾವತಿ, ನರಿಕೊಂಬು ಪಂಚಾಯತ್ ಕಾರ್ಯದರ್ಶಿ ಮಹಮ್ಮದ್ ಶರೀಫ್, ಶಿಕ್ಷಕರಾದ ಭಾರತಿ, ಸುಜಾತ, ಪ್ರಕಾಶ, ಸರಸ್ವತಿ, ಗೀತಾ ಉಡುಪಿ, ಪ್ರಿಯಾ, ಧನರಾಜ್, ಕಛೇರಿ ಸಹಾಯಕ ಹರೀಶ್ ಉಪಸ್ಥಿತರಿದ್ದರು.ಮುಖ್ಯಶಿಕ್ಷಕ ಕಮಲಾಕ್ಷ ಸ್ವಾಗತಿಸಿದರು. ಶಿಕ್ಷಕ ಹರಿಪ್ರಸಾದ್ ನಿರೂಪಿಸಿ ವಂದಿಸಿದರು.








