ಬಂಟ್ವಾಳ: 2003-04ನೇ ಸಾಲಿನಲ್ಲಿ ಆರಂಭವಾದ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆಗೆ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೊದಲ ಬಾರಿಗೆ ನೂರು ಶೇಕಡಾ ಫಲಿತಾಂಶ ದಾಖಲಾಗಿದೆ.
“ಶಾಲೆ ಆರಂಭವಾದಾಗಿನಿಂದಲೂ ನೂರು ಪ್ರತಿಶತ ಫಲಿತಾಂಶ ಪಡೆಯಬೇಕೆಂಬುದು ಶಾಲಾ ಸ್ಥಾಪಕ ದಿ. ಜಗನ್ನಾಥ ಶೆಟ್ಟಿ ಸೇರಿದಂತೆ ನಮ್ಮೆಲ್ಲರ ಆಶಯವಾಗಿತ್ತು. ಪ್ರಸ್ತುತ ವರ್ಷ ಆ ಆಶಯ ಈಡೇರಿದೆ” ಎಂದು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಹರ್ಷ ವ್ಯಕ್ತಪಡಿಸಿದರು.
ಶಾಲೆಯಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಅಭಿನಂದಿಸಿ ಮಾತನಾಡಿದ ಅವರು, “ಮುಂದಿನ ವಿದ್ಯಾಭ್ಯಾಸ ಮುಂದುವರಿಸಲು ಆರ್ಥಿಕ ಸಮಸ್ಯೆ ಇರುವ ವಿದ್ಯಾರ್ಥಿಗಳಿದ್ದರೆ ಅವರಿಗೆ ಬೇಕಾದ ಸಹಾಯ ನೀಡಲು ಸದಾ ಸಿದ್ಧ. ಇನ್ನು ಪ್ರತಿ ವರ್ಷ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಉನ್ನತ ವಿದ್ಯಾಭ್ಯಾಸ ಪೂರೈಸಬೇಕು” ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಾಲಾ ಪ್ರಯೋಗಾಲಯಕ್ಕೆ ಅಗತ್ಯವಾದ ಪೀಠೋಪಕರಣಗಳನ್ನು ಕೊಡುಗೆಯಾಗಿ ನೀಡಿದರು. ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಗಣೇಶ್, ವೀಣಾ, ಸುಜಾತ, ಅಧ್ಯಾಪಕರಾದ ಭಾರತಿ, ಪ್ರಕಾಶ್, ಸರಸ್ವತಿ, ಗೀತಾ ಉಡುಪಿ, ಪ್ರಿಯಾ, ಪದ್ಮ, ಕಚೇರಿ ಸಹಾಯಕ ಹರೀಶ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಕಮಲಾಕ್ಷ ಕಲ್ಲಡ್ಕ ಸ್ವಾಗತಿಸಿದರು. ಶಿಕ್ಷಕಿ ಸರಸ್ವತಿ ಪ್ರಾರ್ಥಿಸಿ, ಹರಿಪ್ರಸಾದ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.








