ಮಳಲಿಯಲ್ಲಿ (ಮಣೇಲ್) ಐತಿಹಾಸಿಕ ಸೂರ್ಯನಾರಾಯಣ ದೇವಸ್ಥಾನದ ಜೀರ್ಣೋದ್ಧಾರ – ನಾಗಬ್ರಹ್ಮ, ರಕ್ತೇಶ್ವರಿ ಸಾನಿಧ್ಯಗಳ ಬ್ರಹ್ಮಕಲಶೋತ್ಸವ ಸಂಪನ್ನ

0

ಬಂಟ್ವಾಳ: ಪೊಳಲಿ ಸಮೀಪದ ಮಳಲಿ(ಮಣೇಲ್)ಯಲ್ಲಿ 13ನೇ ಶತಮಾನದ ಐತಿಹಾಸಿಕ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ನಾಗಬ್ರಹ್ಮ, ರಕ್ತೇಶ್ವರಿ, ನಂದಿಗೋಣ, ಕ್ಷೇತ್ರಪಾಲ ಸಾನಿಧ್ಯಗಳ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಪೊಳಲಿ ಸುಬ್ರಹ್ಮಣ್ಯ ತಂತ್ರಿಗಳ ಮಾರ್ಗದರ್ಶನದಲ್ಲಿ ಶ್ರದ್ಧಾ ಭಕ್ತಿಯಿಂದ ನೆರವೇರಿತು.

ಎರಡು ದಿನಗಳ ಧಾರ್ಮಿಕ ವಿಧಿಗಳು
ಮೇ.9ರಂದು ಸಂಜೆ ವಾಸ್ತು ಪೂಜೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಪ್ರಾಸಾದ ಪರಿಗ್ರಹ, ಪುಣ್ಯಾಹ, ಸಪ್ತಶುದ್ಧಿ, ರಾಕೋಘ್ನ ಹೋಮ, ವಾಸ್ತು ಹೋಮ, ದಿಶಾ ಬಲಿ, ಬಿಂಬಾಧಿವಾಸ ಸೇರಿದಂತೆ ವಿವಿಧ ವೈದಿಕ ವಿಧಿಗಳು ನಡೆದವು. ಮೇ.10ರಂದು ಬೆಳಿಗ್ಗೆ 6:30ಕ್ಕೆ ಗಣಪತಿ ಹೋಮ, ಪ್ರತಿಷ್ಠಾ ಹೋಮ, ಕಲಶ ಪೂಜೆ, ತಿಲ ಹೋಮ, ಆಶ್ಲೇಷ ಬಲಿ ನಡೆಯಿತು. ಬೆಳಿಗ್ಗೆ 9:43ರ ಶುಭ ಮುಹೂರ್ತದಲ್ಲಿ ಪ್ರತಿಷ್ಠಾ ಕಲಶಾಭಿಷೇಕ, ಪಂಚಾಮೃತ ಅಭಿಷೇಕ, ಬ್ರಹ್ಮಕಲಶಾಭಿಷೇಕ ನೆರವೇರಿತು. ಬಳಿಕ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಜರುಗಿತು.

700 ವರ್ಷಗಳ ಇತಿಹಾಸಕ್ಕೆ ಮರುಜೀವ
ಆಳುಪ ದೊರೆ ರಾಜ ಕುಲಶೇಖರರಿಂದ 13ನೇ ಶತಮಾನದಲ್ಲಿ ನಿರ್ಮಾಣಗೊಂಡಿದ್ದ ಈ ದೇವಸ್ಥಾನವು 300-400 ವರ್ಷಗಳ ಹಿಂದೆ ಅವಸಾನಗೊಂಡಿತ್ತು. “ನಾರಾಯಣ ದೇವರಗುಡ್ಡೆ” ಎಂದು ಕರೆಯಲ್ಪಡುತ್ತಿದ್ದ ಈ ಕ್ಷೇತ್ರವು ಮಣೇಲ್ ಮಾಗಣೆಯ ಏಳು ಗ್ರಾಮಗಳ ಆರಾಧನಾ ಕೇಂದ್ರವಾಗಿತ್ತು. ಉಳ್ಳಾಲದ ರಾಣಿ ಅಬ್ಬಕ್ಕದೇವಿ ಕಾಲದಲ್ಲಿ ಮಣೇಲ್ ಪೇಂಟೆ ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು. ರಾಣಿ ಇಲ್ಲಿನ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದ ಬಗ್ಗೆ ಇತಿಹಾಸಕಾರ ಪಿತ್ರೋ ದಲ್ಲಾ ವೆಲ್ಲಾ ದಾಖಲಿಸಿದ್ದಾರೆ.

2.58 ಕೋಟಿ ವೆಚ್ಚದ ಜೀರ್ಣೋದ್ಧಾರ
ಅಷ್ಟಮಂಗಲ ಪ್ರಶ್ನೆಯಲ್ಲಿ ದೇವಸ್ಥಾನದ ಪುನರುತ್ಥಾನದಿಂದ 7 ಗ್ರಾಮಗಳಿಗೆ ರಕ್ಷಣೆ ಸಿಗಲಿದೆ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಜೀರ್ಣೋದ್ಧಾರ ಆರಂಭವಾಗಿದೆ. 30-5-2025ರಂದು ಗರ್ಭಗುಡಿಯ ಶಿಲಾನ್ಯಾಸ ನೆರವೇರಿತ್ತು. ಸದ್ಯ ಬಾಲಾಲಯದಲ್ಲಿ ದೇವರನ್ನು ಪ್ರತಿಷ್ಠಾಪಿಸಿ ಪ್ರತಿ ಆದಿತ್ಯವಾರ ಭಜನೆ ನಡೆಸಲಾಗುತ್ತಿದೆ.

ವಿಶೇಷ
ಇಲ್ಲಿನ ಗಣಪತಿಗೆ “ಸಂಚಾರ ಗಣಪತಿ” ಎಂಬ ಹೆಸರಿದೆ. ಈ ದೇವರು ಉತ್ತರದ ಪುತ್ತಿಗೆ ದೇವಸ್ಥಾನದವರೆಗೆ ಸಂಚರಿಸಿ ಬರುತ್ತಾರೆ ಎಂಬುದು ಭಕ್ತರ ನಂಬಿಕೆ. ಪ್ರಧಾನ ದೇವರು ಶ್ರೀ ಸೂರ್ಯನಾರಾಯಣರೊಂದಿಗೆ ಮಹಾಗಣಪತಿ, ರಕ್ತೇಶ್ವರಿ, ನಂದಿಕೋಣ ಪರಿವಾರ ದೈವಗಳ ಸಹಿತ ನೂತನ ದೇವಾಲಯವು 2,58,50 ಲಕ್ಷ ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ.

ನಿಮ್ಮೂರಿನ ಯಾವುದೇ ಸುದ್ದಿ, ಮಾಹಿತಿಗಳಿದ್ದಲ್ಲಿ ಸಂಪರ್ಕಿಸಿ: +9190351 37252

LEAVE A REPLY

Please enter your comment!
Please enter your name here