ಕಲ್ಲಡ್ಕ: ನ್ಯಾಯಾಂಗ ವ್ಯವಸ್ಥೆಯನ್ನು ಅರಿಯಲು ಅನುಗ್ರಹ ಮಹಿಳಾ ಕಾಲೇಜು ವಿದ್ಯಾರ್ಥಿನಿಯರಿಂದ ನ್ಯಾಯಾಲಯ ಭೇಟಿ

0

ಬಂಟ್ವಾಳ: ಕಲ್ಲಡ್ಕದ ಅನುಗ್ರಹ ಮಹಿಳಾ ಪದವಿ ಕಾಲೇಜಿನ ಮಾನವ ಹಕ್ಕುಗಳ ರಕ್ಷಣಾ ಕ್ಲಬ್ ವತಿಯಿಂದ ವಿದ್ಯಾರ್ಥಿನಿಯರಿಗೆ ನ್ಯಾಯಾಂಗ ವ್ಯವಸ್ಥೆಯ ಪ್ರಾಯೋಗಿಕ ಅರಿವು ನೀಡುವ ಉದ್ದೇಶದಿಂದ ಬಿ.ಸಿ.ರೋಡ್‌ನಲ್ಲಿರುವ ಬಂಟ್ವಾಳದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ಭೇಟಿ ಆಯೋಜಿಸಲಾಯಿತು.

ಈ ಸಂದರ್ಭದಲ್ಲಿ ದ್ವಿತೀಯ ಹಾಗೂ ತೃತೀಯ ಬಿ.ಎ. ತರಗತಿಯ ವಿದ್ಯಾರ್ಥಿನಿಯರು ನ್ಯಾಯಾಲಯದ ಕಾರ್ಯವಿಧಾನವನ್ನು ನೇರವಾಗಿ ವೀಕ್ಷಿಸಿದರು. ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಯುವ ವಿಧಾನ, ನ್ಯಾಯಾಂಗ ವ್ಯವಸ್ಥೆಯ ಕಾರ್ಯಪದ್ಧತಿ ಸೇರಿದಂತೆ ಹಲವು ವಿಷಯಗಳ ಕುರಿತು ವಿದ್ಯಾರ್ಥಿನಿಯರು ಮಾಹಿತಿ ಪಡೆದುಕೊಂಡರು. ನ್ಯಾಯಾಲಯದ ವಾತಾವರಣವನ್ನು ಸಮೀಪದಿಂದ ಅನುಭವಿಸುವ ಮೂಲಕ ಅವರಿಗೆ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಹೆಚ್ಚಿನ ತಿಳುವಳಿಕೆ ದೊರೆಯಿತು.

ಸುಮಾರು 20 ವರ್ಷಗಳಿಂದ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಬೆಳ್ತಂಗಡಿಯ ವಕೀಲರಾದ ಶಿವಯ್ಯ ಅವರು ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿ ಕಾನೂನು ಕ್ಷೇತ್ರದ ಕುರಿತು ವಿವರಿಸಿದರು. ಇದೇ ವೇಳೆ ವಕೀಲರಾದ ಉಮರ್ ಫಾರೂಕ್ ಹಾಗೂ ದಿಲ್ ನಾಝ್ ಅವರು ವಕೀಲ ವೃತ್ತಿಯ ಅವಕಾಶಗಳು ಮತ್ತು ಸವಾಲುಗಳ ಬಗ್ಗೆ ಮಾಹಿತಿ ನೀಡಿದರು.


ವಕೀಲ ತುಳಸಿದಾಸ್ ವಿಟ್ಲ ಅವರ ಮಾರ್ಗದರ್ಶನದಲ್ಲಿ ಈ ಶೈಕ್ಷಣಿಕ ಭೇಟಿಯನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿನಿಯರೊಂದಿಗೆ ಕಾಲೇಜಿನ ಉಪನ್ಯಾಸಕಿಯರಾದ ತಾರಾಕ್ಷಿ (ರಾಜ್ಯಶಾಸ್ತ್ರ ವಿಭಾಗ) ಹಾಗೂ ಬಬಿತ (ಅರ್ಥಶಾಸ್ತ್ರ ವಿಭಾಗ) ಮಾರ್ಗದರ್ಶಕರಾಗಿ ಭಾಗವಹಿಸಿದ್ದರು. ಈ ಭೇಟಿ ವಿದ್ಯಾರ್ಥಿನಿಯರಿಗೆ ಕಾನೂನು ಮತ್ತು ಮಾನವ ಹಕ್ಕುಗಳ ಬಗ್ಗೆ ಅರಿವು ಹೆಚ್ಚಿಸಲು ಸಹಕಾರಿಯಾಯಿತು.

ನಿಮ್ಮೂರಿನ ಯಾವುದೇ ಸುದ್ದಿ, ಮಾಹಿತಿಗಳಿದ್ದಲ್ಲಿ ಸಂಪರ್ಕಿಸಿ: +9190351 37252

LEAVE A REPLY

Please enter your comment!
Please enter your name here