ಬಂಟ್ವಾಳ ಲೋಕ ಅದಾಲತ್‌ನಲ್ಲಿ 7063 ಪ್ರಕರಣ ಇತ್ಯರ್ಥ

0

ಬಂಟ್ವಾಳ: ಇಲ್ಲಿನ ತಾಲೂಕು ಕಾನೂನು ಸೇವೆಗಳ ಸಮಿತಿ ಆಶ್ರಯದಲ್ಲಿ ಬಂಟ್ವಾಳ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ 7063 ಪ್ರಕರಣ ಇತ್ಯರ್ಥಗೊಂಡಿದ್ದು, ವಿವಿಧ ಪ್ರಕರಣಗಳಲ್ಲಿ ಒಟ್ಟು ರೂ.1,90,89,540 ರೂ. ನಗದು ವಸೂಲಾಗಿದೆ ಎಂದು ಬಂಟ್ವಾಳ ತಾಲೂಕು ಕಾನೂನು ಸೇವೆಗಳ ಸಮಿತಿಯ ಪ್ರಕಟಣೆ ತಿಳಿಸಿದೆ.


24 ಸಿವಿಲ್ ಪ್ರಕರಣ ಇತ್ಯರ್ಥವಾಗಿದ್ದು, 39,44,445 ರೂ.ವಸೂಲಾಗಿದೆ. 664 ಕ್ರಿಮಿನಲ್ ಪ್ರಕರಣ ಇತ್ಯರ್ಥವಾಗಿದ್ದು, 50,96,095 ರೂ.ವಸೂಲಾಗಿದೆ. ಅದೇ ರೀತಿ 6375 ಪಿಎಲ್‌ಸಿ ಪ್ರಕರಣಗಳು (ದಾವಾ ಪೂರ್ವ ಪ್ರಕರಣ) ಇತ್ಯರ್ಥಗೊಂಡಿದ್ದು, 1,90,48,000 ರೂ. ಮೊತ್ತ ವಸೂಲಿಯಾಗಿದೆ. ವಿವಿಧ ಶುಲ್ಕ ಪ್ರಕರಣಗಳು, ಎಂಎಂಆರ್‌ಡಿ, ಚೆಕ್ ಬೌನ್ಸ್ ಮೋಟಾರು ವಾಹನ ಪ್ರಕರಣಗಳು ಇತರ ರಾಜಿಯೋಗ್ಯ ಕ್ರಿಮಿನಲ್ ಪ್ರಕರಣಗಳನ್ನು ಪರಿಹರಿಸಿಕೊಳ್ಳಲಾಯಿತು.


ಬಂಟ್ವಾಳ ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರು, ಬಂಟ್ವಾಳ ಹಿರಿಯ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶ ಅನಿಲ್ ಪ್ರಕಾಶ್ ಎಂ.ಪಿ. ಹಾಗೂ ಸದಸ್ಯ ಕಾರ್ಯದರ್ಶಿ ಹಾಗೂ ಹೆಚ್ಚುವರಿ ಸಿವಿಲ್ ಜೆಎಂಎಫ್ ನ್ಯಾಯಾಲಯದ ನ್ಯಾಯಾಧೀಶ ರಾಜೇಂದ್ರ ಪ್ರಸಾದ್ ಅವರ ಸಮಕ್ಷಮದಲ್ಲಿ ಪ್ರಕರಣಗಳು ಇತ್ಯರ್ಥಗೊಂಡವು. ಎಪಿಪಿಗಳಾದ ಸರಸ್ವತಿ, ಹರಿಣಿ ಕುಮಾರಿ ಡಿ.,ಎಜಿಪಿ ಬಿ. ವೆಂಕಟರಮಣ ಶೆಣೈ ,ವಕೀಲರ ಸಂಘದ ಅಧ್ಯಕ್ಷ ರಿಚರ್ಡ್ ಕೋಸ್ತ ಎಂ. ಹಾಗೂ ಸಂಘದ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು. ಲೋಕ ಅದಾಲತ್‌ಗೆ ವಕೀಲರ ಸಂಘ ಬಂಟ್ವಾಳ, ಕಂದಾಯ ಇಲಾಖೆ, ಪುರಸಭೆ, ಪೊಲೀಸ್ ಇಲಾಖೆ, ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಸಹಕಾರಿ ಸಂಸ್ಥೆಗಳು ಸಹಕರಿಸಿದವು. 

ನಿಮ್ಮೂರಿನ ಯಾವುದೇ ಸುದ್ದಿ, ಮಾಹಿತಿಗಳಿದ್ದಲ್ಲಿ ಸಂಪರ್ಕಿಸಿ: +9190351 37252

LEAVE A REPLY

Please enter your comment!
Please enter your name here