ಎಲ್‌ ಪಿಜಿ ಸಿಲಿಂಡರ್ ಕೊರತೆ : ಸೀಮೆಎಣ್ಣೆ ಬಳಕೆಗೆ ಕೇಂದ್ರದ ಗ್ರೀನ್ ಸಿಗ್ನಲ್

0

ಬಂಟ್ವಾಳ: ದೇಶಾದ್ಯಂತ ಎಲ್‌ಪಿಜಿ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯವನ್ನು ನಿವಾರಿಸಲು ಕೇಂದ್ರ ಸರ್ಕಾರವು ಹಲವಾರು ತುರ್ತು ಕ್ರಮಗಳನ್ನು ಕೈಗೊಂಡಿದೆ. ಪ್ರಮುಖವಾಗಿ ಸೀಮೆಎಣ್ಣೆ ಹಂಚಿಕೆ ಹೆಚ್ಚಳ ಮಾಡಿದೆ. ಅಡುಗೆ ಅನಿಲದ ಮೇಲಿನ ಅವಲಂಬನೆಯನ್ನು ತಗ್ಗಿಸಲು, ಪಡಿತರ ವ್ಯವಸ್ಥೆಯ ಮೂಲಕ ನೀಡಲಾಗುವ ಸೀಮೆಎಣ್ಣೆಯ ಪ್ರಮಾಣವನ್ನು ಹೆಚ್ಚಿಸಲಾಗಿದೆ.

ರಾಜ್ಯಗಳಿಗೆ ನೀಡಲಾಗುವ 1 ಲಕ್ಷ ಕಿಲೋಲೀಟರ್ ನಿಯಮಿತ ಕೋಟಾದ ಜೊತೆಗೆ, ಹೆಚ್ಚುವರಿಯಾಗಿ 48,000 ಕಿಲೋಲೀಟರ್ ಸೀಮೆಎಣ್ಣೆಯನ್ನು ಬಿಡುಗಡೆ ಮಾಡಲು ಕೇಂದ್ರ ಆದೇಶಿಸಿದೆ.ಇದು ಪ್ರಾಥಮಿಕವಾಗಿ ಬಡ ಕುಟುಂಬಗಳಿಗೆ ಅಡುಗೆ ತಯಾರಿಸಲು ನೆರವಾಗಲಿದೆ. ಗ್ರಾಮೀಣ ಭಾಗದಲ್ಲಿ ಸಿಲಿಂಡರ್ ಬುಕ್ಕಿಂಗ್ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಎಲ್‌ಪಿಜಿ ಕಾಳಸಂತೆ ತಡೆಯಲು ಮತ್ತು ಸಮರ್ಪಕ ಹಂಚಿಕೆಗಾಗಿ ಬುಕ್ಕಿಂಗ್ ಅವಧಿಯನ್ನು ವಿಸ್ತರಿಸಲಾಗಿದೆ. ಈ ಮೊದಲು 25 ದಿನಕ್ಕೊಮ್ಮೆ ಸಿಲಿಂಡರ್ ಪಡೆಯಬಹುದಾಗಿದ್ದು, ಹೊಸ ನಿಯಮದಂತೆ, ಗ್ರಾಮೀಣ ಗ್ರಾಹಕರು 45 ದಿನಗಳಿಗೊಮ್ಮೆ ಮಾತ್ರ ಸಿಲಿಂಡರ್ ಬುಕ್ ಮಾಡಲು ಅವಕಾಶ ನೀಡಲಾಗಿದೆ. ವಾಣಿಜ್ಯ ಸಿಲಿಂಡರ್‌ಗಳ ಬಳಕೆಯನ್ನು ಕಡಿಮೆ ಮಾಡಲು ಹೋಟೆಲ್‌ಗಳಿಗೆ ಪರ್ಯಾಯ ಇಂಧನ ಬಳಸಲು ಅನುಮತಿ ನೀಡಲಾಗಿದೆ. ಒಂದು ತಿಂಗಳ ಕಾಲ ಬಯೋಮಾಸ್, ಕಲ್ಲಿದ್ದಲು ಮತ್ತು ಆರ್‌ಡಿಎಫ್ ಪೆಲೆಟ್‌ಗಳನ್ನು ಬಳಸಲು ಪರಿಸರ ಸಂಸ್ಥೆಗಳು ಒಪ್ಪಿಗೆ ನೀಡಿವೆ.

ಪೂರೈಕೆ ವ್ಯತ್ಯಯಕ್ಕೆ ಸಂಬಂಧಪಟ್ಟಂತೆ ಮಾತನಾಡಿರುವ ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ, ಭಾರತವು ತನ್ನ ಅಗತ್ಯದ ಶೇ. 60ಕ್ಕಿಂತ ಹೆಚ್ಚು ಎಲ್‌ಪಿಜಿಯನ್ನು ಆಮದು ಮಾಡಿಕೊಳ್ಳುತ್ತಿದೆ ಯುದ್ಧದ ಹಿನ್ನೆಲೆಯಲ್ಲಿ ಇಂಧನ ಸಾಗಾಟದ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿ ಮುಚ್ಚಿರುವುದು ಈ ಬಿಕ್ಕಟ್ಟಿಗೆ ಮುಖ್ಯ ಕಾರಣ ಎಂದು ಹೇಳಿದ್ದಾರೆ. ಸರ್ಕಾರವು ಈಗಾಗಲೇ ತೈಲ ಸಂಸ್ಕರಣಾ ಘಟಕಗಳಿಗೆ ಎಲ್‌ಪಿಜಿ ಉತ್ಪಾದನೆಯನ್ನು ಹೆಚ್ಚಿಸಲು ಸೂಚಿಸಿದೆ. ಪರಿಸ್ಥಿತಿ ಸುಧಾರಿಸುವವರೆಗೆ ಗ್ರಾಹಕರು ‘ಪ್ಯಾನಿಕ್ ಬುಕ್ಕಿಂಗ್’ ಮಾಡದಂತೆ ಮತ್ತು ಇಂಧನವನ್ನು ಮಿತವಾಗಿ ಬಳಸುವಂತೆ ಮನವಿ ಮಾಡಿದೆ. ಇದು ತಾತ್ಕಾಲಿಕ ಸಮಸ್ಯೆಯಾಗಿದ್ದು ಅಂತರ್‌ ರಾಷ್ಟ್ರೀಯ ಮಟ್ಟದಲ್ಲಿ ಪೂರೈಕೆ ಮಾರ್ಗಗಳು ಸರಿಯಾದ ತಕ್ಷಣ ಎಲ್ಲವೂ ಮೊದಲಿನಂತೆ ಆಗಲಿದೆ ಎಂದು ಸರಕಾರ ಭರವಸೆ ನೀಡಿದೆ.

ನಿಮ್ಮೂರಿನ ಯಾವುದೇ ಸುದ್ದಿ, ಮಾಹಿತಿಗಳಿದ್ದಲ್ಲಿ ಸಂಪರ್ಕಿಸಿ: +9190351 37252

LEAVE A REPLY

Please enter your comment!
Please enter your name here