ಪ್ರವೀಣ್‌ ನೆಟ್ಟಾರ್‌ ಹತ್ಯೆ ಪ್ರಕರಣ: ಬೆಳ್ಳಂಬೆಳಗ್ಗೆ SDPI ಮುಖಂಡ ರಿಯಾಝ್‌ ಫರಂಗಿಪೇಟೆ ಮನೆಗೆ NIA ದಾಳಿ

0

ಬಂಟ್ವಾಳ: ಜಲೈ 26ರಂದು ರಾತ್ರಿ ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯವಮುಂದಾಳು ಪ್ರವೀಣ್ ನೆಟ್ಟಾರು(34ವ)ರವರ ಹತ್ಯೆ ಪ್ರಕರಣದ ತನಿಖೆಗೆ‌ ಇಳಿದಿರುವ ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ಸೆ.8ರಂದು ಬೆಳ್ಳಂಬೆಳಗ್ಗೆ ಎಸ್‌ಡಿಪಿಐ ಮುಖಂಡ  ರಿಯಾಝ್‌ ಫರಂಗಿಪೇಟೆ ಅವರ ಮನೆಗೆ ದಾಳಿ ನಡೆಸಿದ್ದಾರೆ. 

ಬೆಂಗಳೂರು ಎನ್.ಐ.ಎ ವಿಶೇಷ ಕೋರ್ಟ್ ಮೂಲಕ ಸರ್ಚ್ ವಾರಂಟ್ ಪಡೆದಿದ್ದ ರಾಷ್ಟ್ರೀಯ ತನಿಖಾ ದಳ ಸಂಸ್ಥೆಯ ಅಧಿಕಾರಿಗಳು ತನಿಖಾ ದಳದ ವಿವಿಧ ವಿಭಾಗದ ಸುಮಾರು 40 ದಕ್ಷ ಅಧಿಕಾರಿಗಳೊಂದಿಗೆ 55ಕ್ಕೂ ಹೆಚ್ಚು ಖಾಸಗಿ ಇನೋವಾ ಕಾರು ಹಾಗೂ ಸರಕಾರಿ ವಾಹನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರ ಸಹಕಾರದೊಂದಿಗೆ ಸೆ.6ರಂದು ಪುತ್ತೂರು ತಾಲೂಕಿನ ನೆಕ್ಕಿಲಾಡಿ, ಮಿತ್ತೂರು, ಸಾಲ್ಮರ, ಅರಿಯಡ್ಕ, ಸುಳ್ಯ ತಾಲೂಕಿನ ಬೆಳ್ಳಾರೆ, ನಾವೂರು ಮತ್ತು ಮಡಿಕೇರಿ ಹಾಗೂ ಮೈಸೂರಿನಲ್ಲಿ ಒಟ್ಟು 33 ಸ್ಥಳಗಳಿಗೆ ಮಿಂಚಿನ ದಾಳಿ ನಡೆಸಿದ್ದರು. 

ಪ್ರವೀಣ್ ಹತ್ಯೆಯಲ್ಲಿ ಭಾಗಿಯಾದ ಹತ್ತು ಆರೋಪಿಗಳ ಮನೆ ಮೇಲೆ, ಹತ್ಯೆ ಬಳಿಕ ಆರೋಪಿಗಳಿಗೆ ಅಶ್ರಯ ನೀಡಿದ ಸ್ಥಳಗಳು, ಕಚೇರಿಗಳು ಹಾಗೂ ಪಿಎಫ್‌ಐನ ಮುಖಂಡರು ಮತ್ತು ಸಕ್ರಿಯ ಕಾರ್ಯಕರ್ತರ ಮನೆಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಕಬಕ ಸಮೀಪದ ಮಿತ್ತೂರಿನಲ್ಲಿರುವ ಫ್ರೀಡಂ ಕಮ್ಯೂನಿಟಿ ಹಾಲ್, ಕಚೇರಿ, ಪಿಎಫ್‌ಐ ಮುಖಂಡರುಗಳಾದ ಪುತ್ತೂರು ಎಪಿಎಂಸಿ ರಸ್ತೆಯ ಸಾದಿಕ್ ಸಾಲ್ಮರ, ಬೆಳ್ಳಾರೆಯ ಇಕ್ಬಾಲ್, ಕುಂಬ್ರದ ಜಾಬೀರ್ ಅರಿಯಡ್ಕ, ಉಪ್ಪಿನಂಗಡಿ ನೆಕ್ಕಿಲಾಡಿಯ ಮಸೂದ್ ಅಗ್ನಾಡಿ, ಮಡಿಕೇರಿಯ ತುಫೇಲ್ ಅವರ ನಿವಾಸ ಸೇರಿದಂತೆ ಒಟ್ಟು 33 ಕಡೆಗಳಲ್ಲಿ ದಾಳಿ ಮಾಡಿ ಶೋಧ ನಡೆಸಿದ್ದರು.

ವಿವಿಧೆಡೆ ಬಳಸಿದ ಮದ್ದುಗುಂಡು ಸುಧಾರಿತ ಶಸ್ತ್ರಾಸ್ತ್ರ, ಕರಪತ್ರಗಳು, ಪುಸ್ತಕಗಳು, ಲ್ಯಾಪ್ ಟ್ಯಾಪ್, ಹಾರ್ಡ್ ಡಿಸ್ಕ್, ನಗದು, ವಶ ಪಡಿಸಿಕೊಂಡಿರುವ ಅಧಿಕಾರಿಗಳು ಕೆಲವು ಗೌಪ್ಯ ಮಾಹಿತಿಗಳನ್ನು ಪತ್ತೆ ಹಚ್ಚಿದ್ದರು. ಬಳಿಕ ಕೆಲವು ಶಂಕಿತ ವ್ಯಕ್ತಿಗಳನ್ನು ಪುತ್ತೂರು ದರ್ಬೆಯ ನಿರೀಕ್ಷಣಾ ಮಂದಿರಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವಾಹನದಲ್ಲಿ ಕರೆ ತಂದು ವಿಚಾರಣೆಗೆ ಒಳಪಡಿಸಿದ್ದರು.

ಇದೀಗ  ಸೆ.8ರಂದು ಬೆಳ್ಳಂಬೆಳಗ್ಗೆ  ಎಸ್‌ಡಿಪಿಐ ಮುಖಂಡ  ರಿಯಾಝ್‌ ಫರಂಗಿಪೇಟೆ ಅವರ ಮನೆಗೆ  ದಾಳಿ ನಡೆಸಿದ್ದಾರೆ.  NIA ಅಧಿಕಾರಿಗಳ ದಾಳಿ ವಿಚಾರ ತಿಳಿಯುತ್ತಿದ್ದಂತೆ ಎಸ್‌ ಡಿ ಪಿಐ ಕಾರ್ಯಕರ್ತರು ರಿಯಾಝ್‌ ಮನೆ ಮುಂದೆ ಮುಗಿ ಬಿದ್ದಿದ್ದಾರೆ. 

10 ಆರೋಪಿಗಳ ಬಂಧನ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಪ್ರಮುಖ ಆರೋಪಿಗಳು ಸೇರಿದಂತೆ ಒಟ್ಟು 10 ಮಂದಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ಸುಳ್ಯದ ಶಿಹಾಬ್, ಪಾಲ್ತಾಡಿ ಅಂಕತಡ್ಕದ ರಿಯಾಝ್, ಸುಳ್ಯ ಎಲಿಮಲೆಯ ಬಶೀರ್ ಅಲ್ಲದೆ ಸವಣೂರಿನ ಝಾಕಿರ್, ಬೆಳ್ಳಾರೆಯ ಶಫೀಕ್, ಪಳ್ಳಿಮಜಲಿನ ಸದ್ದಾಂ, ಹ್ಯಾರೀಸ್, ಬೆಳ್ಳಾರೆ ಗೌರಿ ಹೊಳೆ ಬಳಿಯ ನೌಫಲ್, ನಾವೂರಿನ ಆಬಿದ್ ಮತ್ತು ಜಟ್ಟಿಪಳ್ಳದ ಕಬೀರ್ ಸೇರಿದಂತೆ ಹತ್ತು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಎಲ್ಲರೂ ನ್ಯಾಯಾಂಗ ಬಂಧನದಲ್ಲಿದ್ದಾರೆ.

LEAVE A REPLY

Please enter your comment!
Please enter your name here