ಮಂಗಳೂರು: ಬ್ರಿಲಿಯಂಟ್ ಪದವಿ ಕಾಲೇಜಿನಲ್ಲಿ ಆಜಾದಿ ಕಾ ಅಮೃತ ಮಹೋತ್ಸವವನ್ನು ದಿ. 15ರಂದು ಆಚರಿಸಲಾಯಿತು. ಎರಡು ಯುದ್ಧಗಳಲ್ಲಿ ಭಾಗವಹಿಸಿದ ನಿವೃತ್ತ ಸೇನಾನಿ ಭುಜಂಗ ಶೆಟ್ಟಿ ಮುಖ್ಯ ಅತಿಥಿಯಾಗಿ ಮಾತನಾಡಿ ದೇಶ ಸೇವೆಗೆ ನಾನಾ ಕ್ಷೇತ್ರದಲ್ಲಿ ಅವಕಾಶವಿದೆ ಆದರೆ ಸೇನೆಯಲ್ಲಿ ಸೇವೆ ಸಲ್ಲಿಸುವವರಲ್ಲಿ ಹೆಚ್ಚಿನ ಶಿಸ್ತು, ಪ್ರಾಮಾಣಿಕತೆ ಬೆಳೆಯುತ್ತದೆ. ವಿದ್ಯಾರ್ಥಿಗಳು ಕಠಿಣ ಪರಿಶ್ರಮ ವಹಿಸಿ ಯಾವುದೇ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದರೂ ಅದು ಕೂಡಾ ದೇಶಸೇವೆಯೇ ಆಗುತ್ತದೆ ಎಂದರು.
ಇನ್ನೋರ್ವ ಅತಿಥಿ ವಾಯುಸೇನೆಯ ನಿವೃತ್ತ ಅಧಿಕಾರಿ ದೇವದಾಸ ಪೈ ಮಾತನಾಡಿ ದೇಶಕ್ಕಾಗಿ ಯಾರು ದುಡಿಯುತ್ತಾರೋ, ಕೊಡುಗೆ ನೀಡುತ್ತಾರೋ ಅವರೇ ನಿಜವಾದ ದೇಶಪ್ರೇಮಿಗಳು , ಒಬ್ಬ ಒಳ್ಳೆಯ ಪ್ರಜೆ ಕೂಡಾ ಒಬ್ಬ ಯೋಧನಂತೆ ಎಂದು ತಿಳಿಸಿದರು. ಪ್ರಸಕ್ತ ವಾತಾವರಣದಲ್ಲಿ ಭಾರತ ದೇಶ ಸಂಪೂರ್ಣವಾಗಿ ಸುರಕ್ಷಿತವಾಗಿಲ್ಲ, ಸುತ್ತಮುತ್ತಲಿನ ದೇಶಗಳ ನಡವಳಿಕೆ ದೇಶಕ್ಕೆ ಅಪಾಯಕಾರಿಯಾಗಿದೆ. ದೇಶದ ಜನತೆ ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.ಭೂಸೇನೆ ಮತ್ತು ವಾಯುಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಇಬ್ಬರು ವೀರ ಸೇನಾನಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ರಾಮ್ ಮೋಹನ್ ರೈ ದೇಶದ ಪ್ರಜೆಗಳು ನಿಶ್ಚಿಂತೆಯಿಂದ ನಿದ್ದೆ ಮಾಡಲು ಗಡಿಯಲ್ಲಿ ಪ್ರತಿಕೂಲ ಹವಾಮಾನದಲ್ಲಿಯೂ ನಿದ್ದೆ ಬಿಟ್ಟು ಗಡಿ ಕಾಯುತ್ತಿರುವ ಯೋಧರೇ ಕಾರಣ. ಅವರ ತ್ಯಾಗಕ್ಕೆ ಎಂದೂ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು. ವಿದ್ಯಾರ್ಥಿನಿ ಸಾನಿಯಾ ನಿರೂಪಿಸಿ ಪ್ರಾಂಶುಪಾಲ ನವೀನ್ ಎಸ್.ಎ ವಂದಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಶರತ್, ಲಕ್ಷ್ಮೀನಾರಾಯಣ ದೇವಸ್ಥಾನದ ಮುಖ್ಯ ಅರ್ಚಕ ಅಶೋಕ್ ಭಟ್ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.