ಅಮ್ಟೂರಿನ ದೇವ ಮಾತ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಭ್ರಮದ ಆಟಿ ಕೂಟ : 303 ಬಗೆಯ ತಿಂಡಿ-ತಿನಿಸುಗಳ ಪ್ರದರ್ಶನ

0

ಬಂಟ್ವಾಳ: ಅಮ್ಟೂರಿನ ದೇವ ಮಾತ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆ.13ರಂದು ಆಟಿ ಕೂಟವನ್ನು ಸಂಭ್ರಮದಿಂದ ಆಚರಿಸಲಾಯಿತು. ಕರಾವಳಿಯ ವಿಶಿಷ್ಟ ಆಚಾರ-ವಿಚಾರ, ಆಹಾರ ಪದ್ಧತಿ ಹಾಗೂ ಸಾಂಪ್ರದಾಯಿಕ ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ 303 ಬಗೆಯ ಸಾಂಪ್ರದಾಯಿಕ ತಿಂಡಿ-ತಿನಿಸುಗಳನ್ನು ಪ್ರದರ್ಶಿಸಲಾಯಿತು.

ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ತಯಾರಿಸಿ ತಂದ ವಿವಿಧ ಬಗೆಯ ಸಾಂಪ್ರದಾಯಿಕ ಆಹಾರ ಪದಾರ್ಥಗಳನ್ನು ಮಳಿಗೆಗಳಲ್ಲಿ ಪ್ರದರ್ಶನಕ್ಕಿಟ್ಟಿದ್ದರು. ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ಎಲ್ಲ ತಿನಿಸುಗಳನ್ನು ಹಂಚಿಕೊಂಡು ಸವಿದರು.

ವಿವಿಧ ಬಗೆಯ ಉಪ್ಪಿನಕಾಯಿ, ಹೆಸರುಕಾಳು ಒಗ್ಗರಣೆ, ಅರಶಿನ ಎಲೆಯ ಗಟ್ಟಿ, ಪತ್ರೊಡೆ, ಮೂಡೆ, ಅವಲಕ್ಕಿ, ಅಕ್ಕಿ ಉಂಡೆ, ಸೊಪ್ಪಿನ ಪಲ್ಯ, ವಿವಿಧ ಚಟ್ನಿಗಳು, ಕನಿಲೆ ಪದಾರ್ಥ, ಹಲಸಿನ ಹಣ್ಣಿನ ಗಟ್ಟಿ, ಮೆಂತೆ ಗಂಜಿ, ಹಲಸಿನಕಾಯಿ ಪಲ್ಯ, ರಾಗಿ ಮನ್ನಿ, ಪಾಯಸ, ಬಾಳೆಕಾಯಿ ಸಾಂಬಾರ್, ಕೋಸಂಬರಿ, ಅಕ್ಕಿ ಸೇಮಿಗೆ-ಕೋಳಿ ಸಾಂಬಾರ್, ರವೆ ಉಂಡೆ, ಒಗ್ಗರಣೆ ಪತ್ರೊಡೆ, ಹಲಸಿನ ಹಪ್ಪಳ, ನೀರ್ ಪುಂಡಿ, ಈರುಳ್ಳಿ ದೋಸೆ, ಪೊರಿ ಉಂಡೆ, ಇಡ್ಲಿ, ಗುಲಿಯಪ್ಪ, ಅಕ್ಕಿ ರೊಟ್ಟಿ, ಕಳಲೆ, ಶ್ಯಾವಿಗೆ ಪಾಯಸ, ಊಟ, ಎಳ್ಳುಂಡೆ, ನೀರ್ ದೋಸೆ, ಮಜ್ಜಿಗೆ, ಬಾಳೆಹೂವಿನ ಚಟ್ನಿ, ಸೆಂಡಿಗೆ, ಆಪ, ನೈಯಪ್ಪ ಸೇರಿದಂತೆ ಅಪರೂಪವಾಗುತ್ತಿರುವ ಹಲವು ಸಾಂಪ್ರದಾಯಿಕ ಖಾದ್ಯಗಳು ಗಮನ ಸೆಳೆದವು.

ಇದರೊಂದಿಗೆ ಪುದಿನ ಪಾನೀಯ, ಲಿಂಬು ಶರಬತ್ತು, ಕಲ್ಲಂಗಡಿ ಪಾನೀಯ, ದಾಳಿಂಬೆ ಜ್ಯೂಸ್, ಎಳ್ಳು ಜ್ಯೂಸ್, ರಾಗಿ ಜ್ಯೂಸ್, ಅಲೋವೆರಾ ರಸ, ಪುನರ್ಪುಳಿ ಜ್ಯೂಸ್, ಬೀಟ್‌ರೂಟ್ ರಸ, ಪಾನಕ ಸೇರಿದಂತೆ ವಿವಿಧ ಬಗೆಯ ಪಾನೀಯಗಳನ್ನೂ ವಿದ್ಯಾರ್ಥಿಗಳು ಪರಿಚಯಿಸಿದರು. ವಿವಿಧ ಕಷಾಯಗಳಿಗೂ ವಿಶೇಷ ಸ್ಥಾನ ನೀಡಲಾಗಿತ್ತು. ಕೆತ್ತೆದ ಕಷಾಯ, ಜಿಂಟರದ ಕಷಾಯ, ಮೆಂತ್ಯೆ, ಜೀರಿಗೆ, ಕೊತ್ತಂಬರಿ, ಅಮೃತಬಳ್ಳಿ ಹಾಗೂ ತುಳಸಿ ಕಷಾಯ ಸೇರಿದಂತೆ ಹಲವು ಸಾಂಪ್ರದಾಯಿಕ ಪಾನೀಯಗಳು ಪ್ರದರ್ಶನದಲ್ಲಿದ್ದವು.

ಅಲ್ಲದೆ, ಸಾಂಬ್ರಾಣಿ ಸೊಪ್ಪು, ತುಳಸಿ, ಒಂದೆಲಗ, ಅಲೋವೆರಾ, ಕರಿಮೆಣಸು ಸೇರಿದಂತೆ ಔಷಧೀಯ ಗುಣಗಳನ್ನು ಹೊಂದಿರುವ ವಿವಿಧ ಸಸ್ಯಗಳನ್ನು ವಿದ್ಯಾರ್ಥಿಗಳು ಪರಿಚಯಿಸಿದರು. ಸಾಂಪ್ರದಾಯಿಕ ಜೀವನಶೈಲಿಯಲ್ಲಿ ಇವುಗಳ ಬಳಕೆ ಹಾಗೂ ಮಹತ್ವದ ಕುರಿತು ಮಾಹಿತಿ ನೀಡಿದರು.

ಕರಾವಳಿಯ ಗ್ರಾಮೀಣ ಬದುಕಿನ ಭಾಗವಾಗಿರುವ ಸಾಂಪ್ರದಾಯಿಕ ವಸ್ತುಗಳಿಗೂ ಆಟಿ ಕೂಟದಲ್ಲಿ ಆದ್ಯತೆ ನೀಡಲಾಗಿತ್ತು. ಕಂಬಳದ ಬೆತ್ತ, ಧೂಪ ಹಾಕುವ ಮಣ್ಣಿನ ಹಣತೆ, ಚೆನ್ನೆ ಮಣೆ ಸೇರಿದಂತೆ ಹಲವು ವಸ್ತುಗಳನ್ನು ಪ್ರದರ್ಶನಕ್ಕಿಡಲಾಗಿತ್ತು.

ಆಟಿ ತಿಂಗಳಲ್ಲಿ ಕರಾವಳಿಯ ಮನೆಮನೆಗೆ ಆಟಿ ಕಳೆಂಜ ತೆರಳಿ ನಲಿಯುವುದು ವಾಡಿಕೆ. ಇದೇ ಸಂಪ್ರದಾಯವನ್ನು ಬಿಂಬಿಸುವಂತೆ ಆಟಿ ಕೂಟದಲ್ಲೂ ಆಟಿ ಕಳೆಂಜ ವೇಷಧಾರಿ ಪ್ರತಿಯೊಂದು ಮಳಿಗೆಗೂ ತೆರಳಿ ನಲಿಯುವ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿದರು.

ಕರಾವಳಿಯ ಸಾಂಪ್ರದಾಯಿಕ ಆಹಾರ, ಸಂಸ್ಕೃತಿ, ಗ್ರಾಮೀಣ ಬದುಕು ಹಾಗೂ ಔಷಧೀಯ ಸಸ್ಯಗಳ ಪರಿಚಯವನ್ನು ಒಂದೇ ವೇದಿಕೆಯಲ್ಲಿ ಮೂಡಿಬಂದ ಈ ಆಟಿ ಕೂಟವು ವಿದ್ಯಾರ್ಥಿಗಳಲ್ಲಿ ನಮ್ಮ ನೆಲದ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಅರಿವು ಮೂಡಿಸುವಲ್ಲಿ ವಿಶೇಷ ಗಮನ ಸೆಳೆಯಿತು.

ಸಭಾ ಕಾರ್ಯಕ್ರಮ
ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ತೀರ್ಪುಗಾರ ಸಜಿಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ನಿರ್ದೇಶಕ ಜಯಶಂಕರ್ ಕಾನ್ಸಾಲೆ, ಅಂದಿನ ಕಾಲದಲ್ಲಿ ಆಷಾಢ ತಿಂಗಳು ಬಹಳ ಕಷ್ಟದ ತಿಂಗಳಾಗಿತ್ತು. ದುಡಿಮೆಯೂ ಇರುತ್ತಿರಲಿಲ್ಲ. ಇಂತಹ ಕಾಲದಲ್ಲಿ ಪ್ರಕೃತಿಯಿಂದ ಲಭ್ಯವಾಗುತ್ತಿದ್ದ ಆಹಾರಗಳನ್ನು ಸೇವನೆ ಮಾಡುತ್ತಿದ್ದರು. ಅಂದು ಇದು ಜೀವನ ಆಗಿತ್ತು. ಇಂದು ಅದು ಆಚರಣೆಯಾಗಿದ್ದು, ಅಲ್ಲಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಯುವ ಪೀಳಿಗೆಗೆ ಆಟಿ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಇಂದಿನ ಮಕ್ಕಳು ಆಟಿ ತಿಂಗಳ ಕಷ್ಟುಕಾಲದ ಬಗ್ಗೆ ತಿಳಿದುಕೊಳ್ಳಬೇಕು ಎಂದರು.

ಸುದ್ದಿ ಮೀಡಿಯಾ ಬೆಳ್ತಂಗಡಿಯ ದಾಮೋದರ್ ದೊಂಡೋಲೆ ಮಾತನಾಡಿ, 303ಬಗೆಯ ತಿಂಡಿ ತಿನಿಸುಗಳನ್ನು ಈ ಆಟಿ ಕೂಟದಲ್ಲಿ ಪ್ರದರ್ಶನಕ್ಕಿಡಲಾಗಿದೆ. ಪ್ರಕೃತಿ ಎಷ್ಟು ಶ್ರೀಮಂತವಾಗಿದೆ ಎಂಬುದಕ್ಕೆ ಈ ಆಟಿ ಕೂಟವೇ ಸಾಕ್ಷಿಯಾಗಿದೆ. ಇಂತಹ ಕಾರ್ಯಕ್ರಮಗಳು ಜೀವನ ಶಿಕ್ಷಣವೂ ಆಗಿದೆ ಎಂದು ಹೇಳಿದರು.

ಬಂಟ್ವಾಳ ತಾಲೂಕು ಪಂಚಾಯತ್ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷೆ, ಪಾಣೆಮಂಗಳೂರು ಬ್ಲಾಕ್ ಮಹಿಳಾ ಅಧ್ಯಕ್ಷೆ ಐಡಾ ಸುರೇಶ್ ತೀರ್ಪುಗಾರರಾಗಿ ಆಗಮಿಸಿದ್ದರು. ಶಿಕ್ಷಕರಾದ ಮೊಹಮ್ಮದ್ ಇರ್ಷಾದ್ ಸ್ವಾಗತಿಸಿ, ಪ್ರಾಂಶುಪಾಲ ಫಾದರ್ ನವೀನ್ ಪ್ರಕಾಶ್ ಪಿಂಟೋ ವಂದಿಸಿದರು. ವೀಣಾ ಲಸ್ರಾದೊ ನಿರೂಪಿಸಿದರು.

LEAVE A REPLY

Please enter your comment!
Please enter your name here