ಅಮ್ಮುಂಜೆಯಲ್ಲಿ ವೃದ್ದೆಯ ಕೊಲೆ ಪ್ರಕರಣ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ

0

ಬಂಟ್ವಾಳ: ಐದು ವರ್ಷಗಳ ಹಿಂದೆ ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ, ಪಾಂಡೀಲು ಎಂಬಲ್ಲಿ ವೃದ್ಧೆಯೋರ್ವರನ್ನು ಕೊಲೆಗೈದು ಚಿನ್ನಾಭರಣ ಲೂಟಿಗೈದ ಪ್ರಕರಣದ ಮೂವರು ಆರೋಪಿಗಳಿಗೆ ದ.ಕ.ಜಿಲ್ಲಾ  2 ನೇ ಹೆಚ್ಚುವರಿ  ಮತ್ತು ಸೆಷನ್ಸ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.


ಆರೋಪಿಗಳಾದ ಅಮ್ಟಾಡಿ ಗ್ರಾಮದ ಏರ್ಯ ನಿವಾಸಿ ದಿ. ಪಾಸ್ಕಲ್ ಬರೆಟ್ಟೋ ಅವರ ಪುತ್ರಿ ಏಲ್ಮಾ ಪ್ರೆಶ್ಚಿತ್  ಬರೆಟ್ಟೋ ( 23) ,  ಮಂಗಳೂರು ಉರ್ವ ಹೊಯಿಗೆ ಬೈಲಿನ ನಿವಾಸಿ ಪ್ರಸ್ತುತ ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ಕೇದಿಗೆಯಲ್ಲಿ ವಾಸವಿರುವ ಕಿಶೋರ್ ಕುಮಾರ್ ಅವರ ಪುತ್ರ ಚರಣ್ ಕುಮಾರ್ (28) ಹಾಗೂ ನರಿಕೊಂಬುಗ್ರಾಮದ ಅಂತರ ನಿವಾಸಿ ರಾಮಚಂದ್ರ ನಾಯಕ್ ಅವರ ಪುತ್ರ ಸತೀಶ  ಎ,ಆರ್ (31) ಜೀವಾವಧಿ ಶಿಕ್ಷೆಗೊಳಗಾದವರಾಗಿದ್ದಾರೆ.


ಆರೋಪಿತೆ ಏಲ್ಮಾ ಪ್ರೆಶ್ಚಿತ್  ಬರೆಟ್ಟೋ ಅಮ್ಟಾಡಿ ನಿವಾಸಿ ಬೆನೆಡಿಕ್ಟ್  ಕಾರ್ಲೋ  ( 73) ಎಂಬ ವೃದ್ದೆಯ  ಆರೈಕೆಯನ್ನು ನೋಡಿಕೊಳ್ಳುತ್ತಿದ್ದಳು. ಈ ಸಂದರ್ಭ   ವೃದ್ದೆ ಬೆನಡಿಕ್ಟ್  ಕಾರ್ಲೋರವರ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರ ಹಾಗೂ ಮನೆಯಲ್ಲಿದ್ದ ಇತರ ಚಿನ್ನಾಭರಣಗಳನ್ನು  ಗಮನಿಸಿ ಆರೋಪಿತೆ ಏಲ್ಮಾ ಇದನ್ನು ಸುಲಿಗೆ ಮಾಡಲು ಸಂಚು ರೂಪಸಿದ್ದಳು. ಇದಕ್ಕಾಗಿ ತನ್ನ ಸ್ನೇಹಿತ ಆರೋಪಿ ಸತೀಶ ನಾಯಕ್‌ ನನ್ನು ಸಂಪರ್ಕಿಸಿ, ಕೊಲೆಗೆ ಸಹಕರಿಸುವ ನಿಟ್ಟಿನಲ್ಲಿ ವಿಷ ಪದಾರ್ಥವನ್ನು ಒದಗಿಸುವಂತೆ  ತಿಳಿಸಿದ್ದು, ಅದರಂತೆ ಈತ ಪಾಣೆಮಂಗಳೂರು  ಅಂಗಡಿಯೊಂದರಿಂದ  ವಿಷಪದಾರ್ಥ ಖರೀದಿಸಿ ಒದಗಿಸಿಕೊಟ್ಟಿದ್ದ.
ಈ ವಿಷದ ಅಂಶವನ್ನು ಆಹಾರದಲ್ಲಿ ಬೆರಸಿ ಬೆನಡಿಕ್ಟರವರಿಗೆ ನೀಡಿದ್ದರು. ಆದರೆ ಬೆನಡಿಕ್ಟರವರು ಮಾತ್ರ ಸತ್ತಿರಲಿಲ್ಲ,ಅನಂತರವು ಪಟ್ಟು ಬಿಡದ ಆರೋಪಿತೆ  ಏಲ್ಮಾ  ಬೆನೆಡಿಕ್ಟ್ ಕಾರ್ಲೋರವರನ್ನು  ಸಾಯಿಸಿ ಅವರಲ್ಲಿದ್ದ ಚಿನ್ನಾಭರಣವನ್ನು ಸುಲಿಗೆ ಮಾಡಲೇ ಬೇಕೆಂಬ ದುರುದ್ದೇಶದಿಂದ ಆರೋಪಿತೆ ಕು.ಏಲ್ಮಾ ಪ್ರೆಶ್ಚಿತ್  ಬರೆಟ್ಟೋಳ ಸೂಚನೆಯಂತೆ ಆರೋಪಿ  ಸತೀಶ ನಾಯಕ್‌  ಆತನ ಗೆಳೆಯನಾದ ಆರೋಪಿ ಚರಣ್‌  ಕುಮಾರ್‌ ನನ್ನು ಸಂಪರ್ಕಿಸಿ  ಸುಲಿಗೆಗೈಯಲಾಗುವ ಚಿನ್ನಾಭರಣದಲ್ಲಿ ಪಾಲು ನೀಡುವುದಾಗಿ ಒಪ್ಪಿಸಲಾಗಿತ್ತು.


ಅದರಂತೆ  2021 ರ ಜ.25ರಂದು ರಾತ್ರಿ ಏಲ್ಮಾ ಪ್ರೆಶ್ಚಿತ್  ಬರೆಟ್ಟೋ ಮತ್ತು ಆರೋಪಿ ಚರಣ್ ಕುಮಾರ್ ಬೆನಡಿಕ್ಟ್ ಕಾರ್ಲೋರವರನ್ನು ತಲೆದಿಂಬು ಹಾಗು ಬಟ್ಟೆಯಿಂದ ಬಾಯಿ ಹಾಗು ಮೂಗನ್ನು ಒತ್ತಿ ಹಿಡಿದು ಉಸಿರುಗಟ್ಟಿಸಿ ಕೊಲೆ ಗೈದು,ಬಳಿಕ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರ, ಮನೆಯಲ್ಲಿದ್ದ ಚಿನ್ನದ ಕಿವಿಯೋಲೆ, ಕೈ ಬಳೆ, ಉಂಗುರಗಳು, ಚೈನು  ಒಟ್ಟು  61.070  ಗ್ರಾಂ ತೂಕದ ಅಂದಿನ ದರ ಸುಮಾರು 3 ಲಕ್ಷ  ಮೌಲ್ಯದ  ಚಿನ್ನಾಭರಣವನ್ನು ಸುಲಿಗೆ ಮಾಡಿ ಪರಾರಿಯಾಗಿದ್ದರು.

ಈ ಘಟನೆಯ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಯು.ಡಿ.ಆರ್‌ ಪ್ರಕರಣ ದಾಖಲಾಗಿತ್ತು. ಆಗ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪಿ.ಎಸ್.‌ ಐ. ಪ್ರಸನ್ನ ಎಂ.ಎಸ್.‌ ರವರು ಈ ಕೃತ್ಯದ ಬಗ್ಗೆ ಅನುಮಾನಗೊಂಡ ಇದರ ತನಿಖೆಯನ್ನು ಚುರುಕುಗೊಳಿಸಿದ್ದರು. ಆಗ ಬೆನೆಡಿಕ್ಟ್  ಕಾರ್ಲೋ ಅವರದ್ದು ವ್ಯವಸ್ಥಿತ ಕೊಲೆ ಕೃತ್ಯ ಎಂಬ ಸತ್ಯಾಂಶವನ್ನು ಪತ್ತೆ ಹಚ್ಚಿ ಆರೋಪಿಗಳಾದ ಏಲ್ಮಾ ಪ್ರೆಶ್ಚಿತ್  ಬರೆಟ್ಟೋ, ಸತೀಶ್ ನಾಯಕ್, ಚರಣ್ ಕುಮಾರ್ ಎಂಬವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಚಿನ್ನಾಭರಣಸುಲಿಗೆಗಾಗಿ ಮಾಡಿರುವ ಕೃತ್ಯ ಎಂಬುದು ಬಯಲಿಗೆ ತರುವಲ್ಲಿ ಪಿ.ಎಸ್.‌ ಐ. ಪ್ರಸನ್ನ ಎಂ.ಎಸ್.‌ ರವರು ಯಶಸ್ವಿಯಾಗಿದ್ದರು. ಆಗ  ಬಂಟ್ವಾಳ ಪೊಲೀಸ್‌ ವೃತ್ತ ನಿರೀಕ್ಷಕರಾದ  ಟಿ.ಡಿ. ನಾಗರಾಜ್‌ ರವರು ತನಿಖೆ ಪೂರ್ತಿಗೊಳಿಸಿ ಈ ಮೂವರು ಆರೋಪಿಗಳ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.


ಇದೀಗ ಈ ಪ್ರಕರಣದ ವಿಚಾರಣೆ ನಡೆಸಿದ ದ.ಕ.ಜಿಲ್ಲಾ 2ನೇ ಹೆಚ್ಚುವರಿ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಾದ ಜಗದೀಶ್‌ ವಿ.ಎನ್. ರವರು ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ  ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಜ್ಯೋತಿ ಪ್ರಮೋದ್‌ ನಾಯಕ್‌ ರವರು ವಾದಿಸಿದ್ದರು.  ತನಿಖಾ ಸಹಾಯಕರಾಗಿ ಬಂಟ್ಚಾಳ ಗ್ರಾಮಾಂತರ ಠಾಣೆಯ ಎಎಸ್ ಐ  ಗಿರೀಶ್‌   ಮತ್ತು ಕೋರ್ಟು ಪಿ.ಸಿ ಸಂತೋಷ್‌ ರವರು ಸಹಕರಿಸಿದ್ದರು.

LEAVE A REPLY

Please enter your comment!
Please enter your name here