ಬಂಟ್ವಾಳ: ಲಯನ್ಸ್ ಕ್ಲಬ್ ಕೊಳ್ನಾಡು ಸಾಲೆತ್ತೂರು ಇದರ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮಂಚಿಯಲ್ಲಿರುವ ಲಯನ್ಸ್ ಸೇವಾ ಮಂದಿರದಲ್ಲಿ ಶನಿವಾರ ಸಂಜೆ ನಡೆಯಿತು.
ಪದಗ್ರಹಣ ಅಧಿಕಾರಿಯಾಗಿ ಡಿಸ್ಟ್ರಿಕ್ಟ್ ಸೆಲಬ್ರೆಷನ್ ಚೀಫ್ ಕೋರ್ಡಿನೇಟರ್ ಚಂದ್ರಹಾಸ ರೈ ಬಾಲಜಿಬೈಲು ಭಾಗವಹಿಸಿದ್ದರು. ಅವರು ಮಾತನಾಡಿ ಲಯನ್ಸ್ ಪ್ರಪಂಚದ ಅತ್ಯಂತ ದೊಡ್ಡ ಸೇವಾ ಸಂಸ್ಥೆಯಾಗಿದ್ದು 14 ಲಕ್ಷಕ್ಕಿಂತ ಹೆಚ್ಚು ಸದಸ್ಯರು ಈ ಕ್ಲಬ್ ನಲ್ಲಿದ್ದಾರೆ. ಈ ಕ್ಲಬ್ ನಿಂದ ಹಲವಾರು ಸೇವಾ ಚಟುವಟಿಕೆಗಳು, ಶಾಶ್ವತ ಯೋಜನೆಗಳು ಆಗಿದ್ದು ಯಕ್ಷಗಾನ, ನಾಟ್ಯ, ಭಜನಾ ಕಮ್ಮಟದಂತಹ ಕಾರ್ಯಕ್ರಮಗಳ ತರಬೇತಿಯನ್ನು ನೀಡುತ್ತಿರುವುದು ವಿಶೇಷ ಎಂದರು.

ನೂತನ ಅಧ್ಯಕ್ಷರಾಗಿ ಚಿತ್ತರಂಜನ್ ಕೆ.ಆರ್., ಕಾರ್ಯದರ್ಶಿಯಾಗಿ ಜಯಪ್ರಕಾಶ್ ರೈ, ಕೋಶಾಧಿಕಾರಿಯಾಗಿ ರಾಮ್ ಪ್ರಸಾದ್ ರೈ, ಲಿಯೋ ಅಧ್ಯಕ್ಷರಾಗಿ ಶ್ರೇಯಸ್ ಎಸ್. ರಾವ್, ಕಾರ್ಯದರ್ಶಿಯಾಗಿ ಕುಲದೀಪ್ ಎನ್. ಶೆಟ್ಟಿ, ಕೋಶಾಧಿಕಾರಿಯಾಗಿ ಲಕ್ಷ್ಯ ಶೆಟ್ಟಿ ಸಹಿತ ಇತರ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.

ನೂತನ ಸದಸ್ಯರನ್ನು ಕ್ಲಬ್ ಗೆ ಸೇರಿಸಿಕೊಳ್ಳಲಾಯಿತು. ಕ್ಲಬ್ ನ ಸ್ಥಾಪಕರ ದಿನ ಆಚರಿಸಲಾಯಿತು. ಸ್ಥಾಪಕ ಸದಸ್ಯ ವಿಠಲ ಶೆಟ್ಟಿ ದೀಪ ಪ್ರಜ್ವಲಿಸಿ ಶುಭಾಶಂಸನೆಗೈದರು. ಈ ಸಂದರ್ಭ ವಿಠಲ ಶೆಟ್ಟಿ ದಂಪತಿಯನ್ನು ಸನ್ಮಾನಿಸಲಾಯಿತು.

ನೂತನ ಅಧ್ಯಕ್ಷ ಚಿತ್ತರಂಜನ್ ಕೆ.ಆರ್. ಮಾತನಾಡಿ ಉಮನಾಥ ರೈ ಅವರು ಕಳೆದ ಸಾಲಿನಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ನನ್ನ ಅವಧಿಯಲ್ಲಿ ಕ್ಲಬನ್ನು ಉನ್ನತ ಮಟ್ಟಕ್ಕೆ ಕೊಂಡೊಹೋಗಲು ಪ್ರಯತ್ನಿಸುವುದಾಗಿ ತಿಳಿಸಿದ ಅವರು ಎಲ್ಲರೂ ಸಹಕಾರ ಪೋತ್ಸಾಹ ನೀಡುವಂತೆ ಮನವಿ ಮಾಡಿದರು. ಸೇವಾ ಕಾರ್ಯದ ಅಂಗವಾಗಿ ಆರ್ಥಿಕ ಸಹಕಾರ ನೀಡಲಾಯಿತು. ಸಾಧಕ ವಿದ್ಯಾರ್ಥಿ ಗಳನ್ನು ಅಭಿನಂದಿಸಲಾಯಿತು. ಅನಾರೋಗ್ಯ ಪೀಡಿತರಿಗೆ ಸಹಾಯಧನ ವಿತರಿಸಲಾಯಿತು. ವನಮಹೋತ್ಸವದ ಅಂಗವಾಗಿ ಗಿಡ ವಿತರಿಸಲಾಯಿತು. ರಾಷ್ಟ್ರೀಯ ಸದ್ಭಾವನ ಪ್ರಶಸ್ತಿಗೆ ಭಾಜನರಾದ ರಮಾನಂದ ನೂಜಿಪ್ಪಾಡಿಯವರನ್ನು ಅಭಿನಂದಿಸಲಾಯಿತು.
ನಿರ್ಗಮನ ಅಧ್ಯಕ್ಷ ಉಮನಾಥ ರೈ ಮೇರವು ಮಾತನಾಡಿ ಕ್ಲಬ್ ನ ಶ್ರೇಯೋಬಿವೃದ್ದಿಗಾಗಿ ಪ್ರಾಮಾಣಿಕ ಕೆಲಸ ಮಾಡಿದ್ದೇನೆ ಎನ್ನುವ ಸಂತೋಷ ಇದೆ. ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಅವರು ತನ್ನ ಅವಧಿಯ ಕಾರ್ಯದರ್ಶಿ ಬಾಲಕೃಷ್ಣ ಸೆರ್ಕಳ ಹಾಗೂ ಕೋಶಾಧಿಕಾರಿ ನಿಶ್ಚಲ್ ಶೆಟ್ಟಿಯವರನ್ನು ಗೌರವಿಸಿದರು. ಜಿಲ್ಲೆಯ ಪ್ರಶ್ತಸಿಗಳನ್ನು ವಿಜೇತ ಸದಸ್ಯರಿಗೆ ಪದಗ್ರಹಣ ಅಧಿಕಾರಿ ವಿತರಿಸಿದರು. ಲಿಯೋ ಅಧ್ಯಕ್ಷ ಶ್ರೇಯಸ್ ಎಸ್. ರಾವ್ ಅನಿಸಿಕೆ ವ್ಯಕ್ತಪಡಿಸಿದರು.
ಈ ಸಂದರ್ಭ ಪದಗ್ರಹಣ ಅಧಿಕಾರಿ ಚಂದ್ರಹಾಸ ರೈ, ರಮ್ಯಾ ಸಿ. ರೈ ದಂಪತಿಯನ್ನು ಗೌರವಿಸಲಾಯಿತು. ನಿರ್ಗಮನ ಅಧ್ಯಕ್ಷ, ಕಾರ್ಯದರ್ಶಿ, ಕೋಶಾಧಿಕಾರಿಯನ್ನು ಸನ್ಮಾನಿಸಲಾಯಿತು. ನಿರ್ಗಮನ ಲಿಯೋ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಯನ್ನು ಸನ್ಮಾನಿಸಲಾಯಿತು. ವಲಯ ಸಂಯೋಜಕ ಸಂತೋಷ್ ಹಾಗೂ ದಾಮೋದರ ಬಿ.ಎಂ. ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯದರ್ಶಿ ಜಯಪ್ರಕಾಶ್ ರೈ ಎಂ. ವಂದಿಸಿದರು. ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.








