ಮಂಗಳೂರು : ಪುತ್ತೂರು,ಕಡಬ ಸೇರಿದಂತೆ ದ.ಕ.ಜಿಲ್ಲೆಯಲ್ಲಿ ಆ.7ರಂದು ಕೂಡಾ ಸತತ ಮಳೆಯಾಗಿದೆ. ಮಧ್ಯಾಹ್ನ ಕೆಲಕಾಲ ಬಿಡುವು ಪಡೆದರೂ ಬೆಳಗ್ಗೆ, ಸಂಜೆಯಿಡೀ ಉತ್ತಮ ಮಳೆಯಾಗಿದೆ.ಭಾರೀ ಮಳೆಗೆ ರವಿವಾರ 9 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಇದರೊಂದಿಗೆ ಈ ಬಾರಿಯ ಮಳೆಗೆ 766 ಮನೆಗಳಿಗೆ ಭಾಗಶಃ ಹಾನಿಯಾಗಿದೆ.203 ಮನೆಗಳು ಸಂಪೂರ್ಣ ಕುಸಿದಿವೆ. ರವಿವಾರ ಘಟ್ಟದ ತಪ್ಪಲಿನ ಭಾಗದಲ್ಲಿ ಭಾರೀ ಮಳೆಯಾಗಿದೆ.
ಕಡಲ ತೀರ ಹಾಗೂ ಹೊರ ವಲಯದಲ್ಲಿ ಬಲವಾದ ಗಾಳಿ ಬೀಸಿದೆ. ಘಟ್ಟ ಪ್ರದೇಶದ ಮಳೆಯಿಂದಾಗಿ ನದಿಗಳಲ್ಲಿ ನೀರಿನ ಮಟ್ಟದಲ್ಲೂ ಏರಿಕೆಯಾಗಿದ್ದು, ಕೆಲವೆಡೆ ನದಿ ಪಾತ್ರದ ಕೃಷಿ ಭೂಮಿಗಳಿಗೆ ನೀರು ನುಗ್ಗಿದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಚಂಡ ಮಾರುತವಾಗಿ ಬದಲಾಗುವ ಸಾಧ್ಯತೆಯಿದೆ.ಮಹಾರಾಷ್ಟ್ರದಿಂದ ಕೇರಳದವರೆಗೆ ಕರಾವಳಿಯಲ್ಲಿ ಸುಳಿಗಾಳಿಯೂ ಇದೆ. ಸೋಮವಾರ ಮತ್ತು ಮಂಗಳವಾರ ಕರಾವಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.ಸಮುದ್ರದಲ್ಲಿ 45-55 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆಯು ಎಚ್ಚರಿಕೆ ನೀಡಿದೆ. ರವಿವಾರ ಪುತ್ತೂರು 88.1, ಕಡಬದಲ್ಲಿ 94.6 ಮಿ.ಮೀ,ಬೆಳ್ತಂಗಡಿಯಲ್ಲಿ 80.3 ಮಿ.ಮೀ., ಬಂಟ್ವಾಳ 89.7, ಮಂಗಳೂರು 68.6,ಸುಳ್ಯ 89.1, ಮೂಡುಬಿದಿರೆ 81.3. ಸಹಿತ ಜಿಲ್ಲೆಯಲ್ಲಿ ಸರಾಸರಿ 85 ಮಿ.ಮೀ. ಮಳೆಯಾಗಿದೆ. ರವಿವಾರ ಬೆಳಗ್ಗಿನವರೆಗೆ ಜಿಲ್ಲೆಯಲ್ಲಿ 9 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 12 ವಿದ್ಯುತ್ ಕಂಬಗಳು ಮತ್ತು 0.5 ಮೀ.ನಷ್ಟು ವಿದ್ಯುತ್ ತಂತಿಗೆ ಹಾನಿಯಾಗಿದೆ. ಸದ್ಯ ಜಿಲ್ಲೆಯಲ್ಲಿ 76 ಮಂದಿ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಸುಳ್ಯದ ಕಲ್ಮಕಾರು ಸರಕಾರಿ ಶಾಲೆಯಲ್ಲಿ 28, ಸಂಪಾಜೆ ಸಜ್ಜನ ಪ್ರತಿಷ್ಠಾನದಲ್ಲಿ 25, ಕಡಬ ತಾಲೂಕಿನ ಸುಬ್ರಹ್ಮಣ್ಯದ ಅಭಯ ವಸತಿ ಗೃಹದಲ್ಲಿ 23 ಮಂದಿ ಆಶ್ರಯ ಪಡೆದಿದ್ದಾರೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.