“ಹಸಿರಾಗಲಿ… ಹಸಿವೆಂಗದ ಧರೆ – ಪ್ರಕೃತಿಯ ರಕ್ಷಣೆ ನಮ್ಮ ಹೊಣೆ”

0

@ಸುದ್ದಿ ಮೀಡಿಯಾ ಬ್ಯೂರೋ

ಜೂ.5 ಬಂತೆಂದರೆ ವಿಶ್ವದಾಂದ್ಯಂತ ಪರಿಸರ ಪ್ರೇಮದ ಅಲೆ ಏಳುತ್ತದೆ. ಆದರೆ ಈ ವರ್ಷದ ಪರಿಸರ ದಿನಾಚರಣೆ ಕೇವಲ ಒಂದು ದಿನದ ಆಚರಣೆಯಾಗಿ ಉಳಿದಿಲ್ಲ. ಇದು ನಾವಿಂದು ಬದುಕುತ್ತಿರುವ ಕಠಿಣ ಹವಾಮಾನ ಪರಿಸ್ಥಿತಿಗೆ ಕನ್ನಡಿ ಹಿಡಿಯುವ ಮುನ್ನೆಚ್ಚರಿಕೆಯಾಗಿದೆ.

ಪ್ರತಿ ವರ್ಷ ಜೂ.5ರಂದು ಜಗತ್ತಿನಾದ್ಯಂತ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ವಿಶ್ವ ಸಂಸ್ಥೆಯ ಪರಿಸರ ಕಾರ್ಯಕ್ರಮವೂ ಜಾಗತಿಕ ಮಟ್ಟದ ಮುಖ್ಯ ಆಚರಣೆಯ ಜವಾಬ್ದಾರಿಯನ್ನು ಅಝರ್‌ ಬೈಜಾನ್‌ ದೇಶಕ್ಕೆ ನೀಡಿದೆ. “ಪ್ರಕೃತಿಯಿಂದ ಪ್ರೇರಿತರಾಗಿ-ಹವಾಮಾನಕ್ಕಾಗಿ, ನಮ್ಮ ಭವಿಷ್ಯಕ್ಕಾಗಿ” ಇದು ಈ ಬಾರಿಯ ಪರಿಸರ ದಿನದ ಜಾಗತಿಕ ಘೋಷ ವಾಕ್ಯ. ಇದರೊಂದಿಗೆ “ಜಾಗತಿಕವಾಗಿ, ಈಗಲೇ ಹವಾಮಾನಕ್ಕಾಗಿ ಬದಲಾಗಿ” ಎಂಬ ಅಭಿಯಾನವನ್ನು ತೀವ್ರಗೊಳಿಸಲಾಗಿದೆ. ಪರಿಸರ ನಾಶದ ಬಗ್ಗೆ ಕೇವಲ ಚರ್ಚೆ ಮಾಡುವ ಕಾಲ ಮುಗಿದಿದೆ. ಪ್ರಕೃತಿ ನಮಗೆ ನೀಡುತ್ತಿರುವ ಎಚ್ಚರಿಕೆಯ ಕರೆಗಂಟೆಗೆ ಅನುಸಾರವಾಗಿ ನಾವೀಗ ತಕ್ಷಣ ಕಾರ್ಯಪ್ರವೃತ್ತರಾಗಬೇಕಿದೆ ಎಂಬುವುದೇ ಇದರ ಸ್ಪಷ್ಟ ಸಂದೇಶ.

ಇತ್ತೀಚಿನ ವರ್ಷಗಳಲ್ಲಿ ನಾವು ಕಾಣುತ್ತಿರುವ ದಾಖಲೆ ಮಟ್ಟದ ಬೇಸಿಗೆಯ ತಾಪಮಾನ ದಿಢೀರ್‌ ಪ್ರವಾಹಗಳು ಮತ್ತು ಬದಲಾಗುತ್ತಿರುವ ಮುಂಗಾರಿನ ಹಾದಿ, ಪ್ರಕೃತಿ ನಮಗೆ ನೀಡುತ್ತಿರುವ ನೇರ ಎಚ್ಚರಿಕೆಯಾಗಿದೆ. ನಾವಿಂದು ಅನುಭವಿಸುತ್ತಿರುವ ಜಾಗತಿಕ ತಾಪಮಾನ ಏರಿಕೆಗೆ ಕಾರ್ಖಾನೆಗಳಷ್ಟೇ ಕಾರಣವಲ್ಲ. ನಮ್ಮ ದೈನಂದಿನ ಜೀವನ ಶೈಲಿಯೂ ಪ್ರಮುಖ ಪಾತ್ರವಹಿಸುತ್ತಿದೆ. ನಾವು ಬಳಸುವ ಪ್ಲಾಸ್ಟಿಕ್‌, ವ್ಯರ್ಥಮಾಡುವ ನೀರು, ಹಾಗೂ ಮಿತಿ ಮೀರಿದ ತಂತ್ರಜ್ಞಾನದ ಬಳಕೆಯಿಂದ ಸೃಷ್ಟಿಯಾಗುವ ಈ ತ್ಯಾಜ್ಯಗಳು ಭೂಮಿಯನ್ನು ಉಸಿರುಗಟ್ಟಿಸುತ್ತಿದೆ. ನಾವು ಮಾಡಬಹುದಾದ ನಾಲ್ಕು ಸರಳ ಮತ್ತು ಮಹತ್ತರ ಬದಲಾವಣೆಗಳು ನಮ್ಮ ಪರಿಸರವನ್ನು ಉಳಿಸಲು ಸಹಾಯ ಮಾಡಬಲ್ಲದು. ನಮ್ಮ ಪರಿಸರವನ್ನು ಉಳಿಸಲು ನಾವು ದೊಡ್ಡ ಉದ್ಯಮಿಯಾಗಬೇಕಿಲ್ಲ ಅಥವಾ ಸರಕಾರದ ಯೋಜನೆಗಳಿಗೆ ಕಾಯಬೇಕಾಗಿಲ್ಲ. ನಮ್ಮ ಮನೆಯಿಂದಲೇ ಈ ಸಂಬಂಧ ಸಣ್ಣ ಹೆಜ್ಜೆ ಇಡುವ ಮೂಲಕ ಪರಿಸರದ ರಕ್ಷಣೆಯನ್ನು ಈ ರೀತಿಯೂ ಮಾಡಬಹುದಾಗಿದೆ. ಅನಗತ್ಯ ಕಾಗದದ ಬಳಕೆ ನಿಲ್ಲಿಸುವ ಮೂಲಕ ಸಾವಿರಾರು ಮರಗಳ ಮಾರಣಹೋಮವನ್ನು ತಡೆಯಬಹುದು. ಮಾರುಕಟ್ಟೆಗೆ ಹೋಗುವಾಗ ಬಟ್ಟೆಯ ಚೀಲವನ್ನು ಕೊಂಡೊಯ್ಯುವ ಮೂಲಕ ಮಣ್ಣು ನೀರಿನ ಮಾಲಿನ್ಯವನ್ನು ತಡೆಗಟ್ಟಬಹುದು. ಮಳೆ ನೀರು ಕೊಯ್ಲು ನೀರಿನ ಮರುಬಳಕೆ ಮಾಡುವ ಮೂಲಕ ಅಂತರ್‌ಜಲ ವೃದ್ಧಿ ಮಾಡಬಹುದು. ಹುಟ್ಟುಹಬ್ಬ ಮತ್ತು ವಿಶೇಷ ದಿನಗಳಲ್ಲಿ ಒಂದು ಗಿಡ ನೆಟ್ಟು ಪೋಷಿಸುವ ಮೂಲಕ ಸ್ಥಳೀಯ ತಾಪಮಾನವನ್ನು ಕಡಿಮೆ ಮಾಡಬಹುದು.

ಭೂಮಿ ನಮ್ಮ ಸ್ವತ್ತಲ್ಲ. ನಮ್ಮ ಪೂರ್ಜರಿಂದ ನಮಗೆ ಸಿಕ್ಕ ಬಳುವಳಿಯೂ ಅಲ್ಲ. ಬದಲಿಗೆ ನಮ್ಮ ಮಕ್ಕಳಿಂದ ನಾವು ಪಡೆದ ಸಾಲ, ನಮ್ಮ ಮುಂದಿನ ಪೀಳಿಗೆಯ ಸ್ವತ್ತು. ಪರಿಸರ ದಿನದಂದು ಕೇವಲ ವಾಟ್ಸಪ್‌ ಸ್ಟೇಟಸ್‌ ಗಳಲ್ಲಿ ಗಿಡ ನೆಡುವ ಫೋಟೋ ಹಾಕಿ ಕೈ ತೊಳೆದುಕೊಳ್ಳುವ ಸಂಸ್ಕೃತಿ ಬದಲಾಗಬೇಕು. ಪ್ರಕೃತಿ ನಮಗೆ ಎಲ್ಲವನ್ನು ಉಚಿತವಾಗಿ ನೀಡಿದೆ. ಶುದ್ಧಗಾಳಿ, ನೀರು, ನೆರಳು……ಆದರೆ ನಾವು ಇದಕ್ಕೆ ಪ್ರತಿಯಾಗಿ ಕೊಡುತ್ತಿರುವುದು ಕೇವಲ ಕಸ ಮತ್ತು ಮಾಲಿನ್ಯವನ್ನು ಮಾತ್ರ. ಇಂದಿನಿಂದಲೇ ನಮ್ಮ ದಿನನಿತ್ಯದ ಬದುಕಿನಲ್ಲಿ ಪರಿಸರ ಸ್ನೇಹಿ ನಿಯಮಗಳನ್ನು ಅಳವಡಿಸಿಕೊಳ್ಳೋಣ. ನಮ್ಮ ಭವಿಷ್ಯಕ್ಕಾಗಿ, ಆರೋಗ್ಯಕರ ಉಸಿರಾಟಕ್ಕಾಗಿ ಪ್ರಕೃತಿಯನ್ನು ರಕ್ಷಿಸೋಣ. “ಪರಿಸರ ಮಾಲಿನ್ಯಕ್ಕೆ ಮುಕ್ತಿ ನೀಡಿ – ಹಸಿರು ಜಗತ್ತಿಗೆ ದಾರಿ ಮಾಡಿ”.

LEAVE A REPLY

Please enter your comment!
Please enter your name here