ಬಂಟ್ವಾಳ: ತೆಂಕುತಿಟ್ಟು ಯಕ್ಷಗಾನ ಕಲಾ ರಂಗದ ಅತ್ಯಂತ ಮೇರು ಕಲಾವಿದ ‘ದಶಾವತಾರಿ’ ಎಂದೇ ಜನಪ್ರಿಯರಾಗಿದ್ದ ಸೂರಿಕುಮೇರು ಕೆ.ಗೋವಿಂದ ಭಟ್ (90ವ)ರವರು ತೀರ್ಥಹಳ್ಳಿಯ ತಮ್ಮ ಪುತ್ರನ ನಿವಾಸದಲ್ಲಿ ಮಾ.20ರ ರಾತ್ರಿ ನಿಧನರಾದರು.
ತೆಂಕುತಿಟ್ಟು ಯಕ್ಷಗಾನದ ‘ದಶಾವತಾರಿ’ ಎಂದೇ ಪ್ರಸಿದ್ಧರಾಗಿದ್ದ ಸೂರಿಕುಮೇರು ಕೆ. ಗೋವಿಂದ ಭಟ್ಟರು ತೆಂಕುತಿಟ್ಟು ಯಕ್ಷಗಾನಕ್ಕೆ ಎರಡನೇ ರಾಷ್ಟ್ರಪ್ರಶಸ್ತಿ ತಂದು ಕೊಟ್ಟವರು.ಯಕ್ಷರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದ ಅವರು ದಾಖಲೆಯ ಎಪ್ಪತ್ತು ವರ್ಷಗಳ ಕಾಲ ತಿರುಗಾಟದಲ್ಲಿ ಬದುಕನ್ನು ಸವೆಸಿದವರು. ಧರ್ಮಸ್ಥಳ ಒಂದೇ ಮೇಳದಲ್ಲಿ 54 ವರ್ಷಗಳ ಕಾಲ ದುಡಿದವರು.ತಮ್ಮ ಯಕ್ಷತಿರುಗಾಟದ ಅನುಭವ ಕಥನವನ್ನು ‘ಎಪ್ಪತ್ತು ತಿರುಗಾಟಗಳು’ ಎಂಬ ಕೃತಿಯಲ್ಲಿ ಅವರು ನಿರೂಪಿಸಿದ್ದಾರೆ.
ವಿಟ್ಲ ಕೋಡಪದವು ಶಾಲೆಯಲ್ಲಿ 7ನೇ ತರಗತಿವರೆಗೆ ಕಲಿತಿದ್ದ ಗೋವಿಂದ ಭಟ್ಟರು ಬಾಲ್ಯದಲ್ಲೇ ಸಂಕಷ್ಟದ ಜೀವನ ಎದುರಿಸಿದರೂ ಕಂಗೆಡದೆ ಧೈರ್ಯದಿಂದ ಎದುರಿಸಿ ಮುನ್ನಡೆದವರು.ಜೀವನೋಪಾಯಕ್ಕಾಗಿ ಯಕ್ಷಗಾನಕ್ಕೆ ಸೇರಿದ್ದ ಅವರು ಹಿರಿಯ ಕಲಾವಿದರ ಜೊತೆ ಪಳಗಿ ರಂಗಸ್ಥಳದ ಮಹಾನ್ ಕಲಾವಿದರಾಗಿ ರಾರಾಜಿಸಿದರು.ಕುರಿಯ ವಿಠಲ ಶಾಸಿ, ಪರಮಶಿವನ್, ಮಾಧವ ಮೆನನ್ ಮತ್ತು ರಾಜನ್ ಅಯ್ಯರ್ ಅವರಿಂದ ನಾಟ್ಯಾಭ್ಯಾಸ ಮಾಡಿ 1951ರಲ್ಲಿ ಯಕ್ಷಗಾನ ಮೇಳಕ್ಕೆ ಸೇರ್ಪಡೆಗೊಂಡರು.
ಸಹಕಲಾವಿದರಿಂದ ‘ಗುರು ಗೋವಿಂದ ಭಟ್ಟರು’ ಎನಿಸಿಕೊಂಡ ಇವರು ಪ್ರಾರಂಭದಲ್ಲಿ ಸ್ತ್ರೀ ಪಾತ್ರ ನಿರ್ವಹಿಸಿ ಸೈ ಎನಿಸಿಕೊಂಡರು. ಬಳಿಕ ವೈವಿಧ್ಯಮಯ ಪಾತ್ರ ನಿರ್ವಹಣೆ ಮೂಲಕ, ಯಾವುದೇ ವೇಷಕ್ಕೂ ಸೈ ಎನ್ನುವ ಕಲಾವಿದರಾಗಿ ಮೇಳಕ್ಕೆ ಅನಿವಾರ್ಯರಾದರು. ಮೂಲ್ಕಿ, ಕೂಡ್ಲು, ಸುರತ್ಕಲ್, ಇರಾ ಮೇಳಗಳಲ್ಲಿ ಕೆಲಸ ಮಾಡಿದ ಬಳಿಕ ಧರ್ಮಸ್ಥಳ ಮೇಳ ಸೇರಿದ ಸೂರಿಕುಮೇರು ಗೋವಿಂದ ಭಟ್ಟರ ‘ಕುಮಾರಯ್ಯ ಹೆಗ್ಗಡೆ’, ‘ಋತುಪರ್ಣ’, ‘ಕೌರವ’ ಮುಂತಾದ ಪಾತ್ರಗಳು ಪ್ರಸಿದ್ಧ. ವಾಕ್ಯರೂಪದಲ್ಲಿ ಸ್ಪಷ್ಟವಾಗಿ ಅರ್ಥ ಹೇಳುವ ಭಟ್ಟರ ಕಂಠಸಿರಿಯೂ ಭಿನ್ನ. ಅವರ ಕೌರವ ಪಾತ್ರಕ್ಕೆ ತನ್ನದೇ ಆದ ವಿಶೇಷತೆಯಿದೆ. ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಹೆಗ್ಗಡೆ, ಗಣಮಣಿ, ಈಶ್ವರ, ಶ್ರೀದೇವಿ ಮಹಾತ್ಮೆಯ ರಕ್ತಬೀಜ, ಶ್ರೀದೇವಿ ಸಹಿತ ದೇವೇಂದ್ರ, ಕೌರವ, ಶತ್ರುಘ್ನ, ಕೀಚಕ, ದಕ್ಷ, ಮಾಗಧ, ಶಿಶುಪಾಲ ಮುಂತಾದ ಇವರ ಪಾತ್ರಗಳು ಅವಿಸ್ಮರಣೀಯವೆನಿಸಿವೆ. ಪ್ರಸಂಗಕರ್ತರೂ ಆಗಿದ್ದ ಗೋವಿಂದ ಭಟ್ಟರು ಮಣಿಮೇಖಲೆ, ಕನಕರೇಖೆ, ಕಾವೇರಿ ಮಹಾತ್ಮೆ, ಮೂರೂವರೆ ವಜ್ರಗಳು, ರಾಜಶೇಖರ ವಿಲಾಸ, ಮಹಾವೀರ ಸಾಮ್ರಾಟ ಅಶೋಕ, ನಹುಷೇಂದ್ರ ಮುಂತಾದ ಪ್ರಸಂಗಗಳನ್ನು ರಚಿಸಿದ್ದಾರೆ. ಯಕ್ಷಗಾನದ ಮಹಾನ್ ಕಲಾವಿದ ಸೂರಿಕುಮೇರು ಗೋವಿಂದ ಭಟ್ಟರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಅಲ್ಲದೆ ಅನೇಕ ಪ್ರತಿಷ್ಟಿತ ಸಂಘ, ಸಂಸ್ಥೆಗಳಿಂದ ಗೌರವಗಳು ಸಂದಿವೆ. ಪ್ರತಿವರ್ಷ ಅವರು ಪುತ್ತೂರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ವೇಷಧರಿಸಿ ಪಾತ್ರ ಮಾಡುತ್ತಿದ್ದರು.
ಮೃತರು ಪತ್ನಿ, ಮೂವರು ಪುತ್ರರನ್ನು ಅಗಲಿದ್ದಾರೆ.
ನಿಮ್ಮೂರಿನ ಯಾವುದೇ ಸುದ್ದಿ, ಮಾಹಿತಿಗಳಿದ್ದಲ್ಲಿ ಸಂಪರ್ಕಿಸಿ: +9190351 37252








