ಬಂಟ್ವಾಳ: ಕೋಳಿ ಮೊಟ್ಟೆ ಇಡಲು ಕಾವು ಕೂತಿದ್ದ ಸ್ಥಳಕ್ಕೆ, ಮೊಟ್ಟೆ ತಿನ್ನಲು ಬಂದ ನಾಗರ ಹಾವೊಂದು ಆಕಸ್ಮಿಕವಾಗಿ ಹುಲ್ಲು ಕತ್ತರಿಸುವ ಬ್ಲೇಡ್ನ ತೂತಿನೊಳಗೆ ನುಗ್ಗಿ ಅಪಾಯದಲ್ಲಿ ಸಿಲುಕಿಕೊಂಡ ಮತ್ತು ಹಾವನ್ನು ಉರಗ ತಜ್ಞ ತೇಜಸ್ ಅವರು ರಕ್ಷಣೆ ಮಾಡಿದ ಘಟನೆ ಮಾ.16ರಂದು ಅನಂತಾಡಿಯಲ್ಲಿ ನಡೆದಿದೆ.
ಅನಂತಾಡಿ ಪುರುಷೋತ್ತಮ ಗೌಡ ಅವರ ಮನೆಯಲ್ಲಿ ಕೋಳಿ ಮೊಟ್ಟೆ ಇಡಲು ಕೂತಿದ್ದ ಸ್ಥಳಕ್ಕೆ ನಾಗರಹಾವೊಂದು ಮೊಟ್ಟೆ ತಿನ್ನಲು ಬಂದಿದ್ದ ವೇಳೆ ಅಲ್ಲಿ ಹುಲ್ಲು ಕತ್ತರಿಸುವ ಬ್ಲೇಡ್ನ ತೂತಿನೊಳಗೆ ಹೊಕ್ಕಿ ಚಲಿಸಲಾಗದೆ ಒದ್ದಾಡುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಪುರುಷೋತ್ತಮ ಗೌಡ ಅವರು ಉರಗತಜ್ಞ ತೇಜಸ್ ಅವರಿಗೆ ಕರೆ ಮಾಡಿದ್ದರು. ತೇಜಸ್ ಅವರು ಸ್ಥಳಕ್ಕೆ ಆಗಮಿಸಿ ಹುಲ್ಲು ಕತ್ತರಿಸುವ ಬ್ಲೇಡ್ನಿಂದ ಹಾವನ್ನು ಬಹಳ ನಾಜೂಕಾಗಿ ಬಿಡಿಸಿ ಗಾಯಗೊಂಡ ಹಾವಿಗೆ ಔಷಧಿ ಹಚ್ಚಿ ಮನೆಯಲ್ಲಿ ರಕ್ಷಣೆ ಮಾಡಿದ್ದಾರೆ. ಹಾವು ಸಂಪೂರ್ಣ ಗುಣಮುಖಗೊಂಡ ಬಳಿಕ ಅದನ್ನು ರಕ್ಷಿತಾರಣ್ಯಕ್ಕೆ ಬಿಡಲಾಗುವುದು ಎಂದು ಅವರು ತಿಳಿಸಿದ್ದಾರೆ.








