ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವಿಗಾಗಿ ಸಾಮೂಹಿಕ ಧರಣಿ

0

ಬಂಟ್ವಾಳ: ಕಳೆದ 23 ವರ್ಷಗಳಿಂದ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ ಟೋಲ್ ಸಂಗ್ರಹಿಸುತ್ತಿರುವ ಬ್ರಹ್ಮರಕೂಟ್ಲು ಟೋಲ್‌ಗೇಟ್ ಮುಚ್ಚಲು ಆಗ್ರಹಿಸಿ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ಪ್ರಥಮ ಹಂತದ ಸಾಮೂಹಿಕ ಧರಣಿ ಮಾ.3ರಂದು ಬ್ರಹ್ಮರಕೂಟ್ಲು ಟೋಲ್‌ಗೇಟ್‌ ಸಮೀಪ ನಡೆಯಿತು.


ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಈ ಟೋಲ್‌ಗೇಟ್ ಕಾನೂನು ಬಾಹಿರವಾಗಿ ಹಣ ಸಂಗ್ರಹಿಸುತ್ತಿದ್ದು, ಸುಲಿಗೆಯ ಕೇಂದ್ರವಾಗಿದೆ. ಈ ಟೋಲ್‌ಗೇಟನ್ನು ತೆರವು ಮಾಡಬೇಕಾಗಿರುವುದು ನ್ಯಾಯಯುತವಾದ ಬೇಡಿಕೆ ಎಂದರು. ಟೋಲ್‌ಗೇಟ್ ಮಾಡಲು ಅರ್ಹತೆ ಇಲ್ಲದ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಈ ಟೋಲ್‌ಗೇಟ್ ತೆರವು ಆಗುವವರೆಗೂ ಹೋರಾಟ ನಿರಂತರವಾಗಿ ನಡೆಯಲಿದೆ ಎಂದರು.


ಸಾಮಾಜಿಕ ಮುಖಂಡ ಮುನೀರ್ ಕಾಟಿಪಳ್ಳ ಮಾತನಾಡಿ, ಜಿಲ್ಲೆಯಲ್ಲಿ ಕಳೆದ 30 ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ದಿ ಕಾರ್ಯ ಆಗುತ್ತಿದೆ. ಆದರೆ ಹೆದ್ದಾರಿ ಪ್ರಾಧಿಕಾರ ಒಮ್ಮೆಯೂ ಅಹವಾಲು ಸಭೆ ಕರೆದಿಲ್ಲ. ಇಲ್ಲಿ ಟೋಲ್‌ಗೇಟ್‌ನಲ್ಲಿ ಅಂತರದ ನಿಯಮ ಪಾಲನೆಯಾಗಿಲ್ಲ. ಈ ರಸ್ತೆಯಲ್ಲಿ ಸರ್ವಿಸ್ ರಸ್ತೆಯಿಲ್ಲ, ಫ್ಲೈ ಓವರ್ ಇಲ್ಲ. ಅಂಡರ್ ಪಾಸ್ ಇಲ್ಲ ಆದರೂ ಈ ರಸ್ತೆಗೆ ಹಾಕಿದ ಹಣ ಬಂದಿಲ್ಲವೆಂದರೆ ಇಲ್ಲಿ ಇಷ್ಟು ವರ್ಷ ಸಂಗ್ರಹವಾದ ಹಣವನ್ನು ಯಾರು ತಿಂದಿದ್ದಾರೆ? ಎಂದು ನಾವು ಪ್ರಶ್ನಿಸಬೇಕಾಗಿದೆ ಎಂದರು.


ಧರಣಿ ಸತ್ಯಾಗ್ರಹದಲ್ಲಿ ಸಮಿತಿಯ ಸಂಚಾಲಕರಾದ ಮೋಹನ್ ಶೆಟ್ಟಿ, ಬಿ. ಶೇಖರ್ ಪ್ರಮುಖರಾದ ಪದ್ಮರಾಜ್ ಆರ್. ಪೂಜಾರಿ, ಎಂ.ಜಿ. ಹೆಗಡೆ, ಮಮತಾ ಡಿ.ಎಸ್. ಗಟ್ಟಿ, ಪಿಯೂಸ್ ಎಲ್. ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್. ಮಹಮ್ಮದ್, ಅಪ್ಪಿ, ಬೇಬಿ ಕುಂದರ್, ಸೊಹೈಲ್ ಕಂದಕ್, ಉಮೇಶ್ ಕುಮಾರ್ ವೈ, ಬಿ.ಎಂ. ಭಟ್, ಶ್ರೀಧರ್ ಶೆಟ್ಟಿ, ವಾಸು ಪೂಜಾರಿ, ಇಬ್ರಾಹಿಂ ನವಾಝ್, ಸುದರ್ಶನ್ ಜೈನ್, ರಾಮಕೃಷ್ಣ ಆಳ್ವ, ಜೋಸ್ಪಿನ್ ಡಿಸೋಜಾ, ಶೈಲಜಾ ರಾಜೇಶ್, ಸುದೀಪ್ ಕುಮಾರ್ ಶೆಟ್ಟಿ, ಪದ್ಮನಾಭ ರೈ, ಸದಾಶಿವ ಬಂಗೇರ ಮತ್ತಿತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here