ವಿಟ್ಲ: ಇಹಪರದ ಸುಖಕ್ಕೆ ಧರ್ಮ ಮಾರ್ಗ ರಹದಾರಿ. ಪ್ರೀತಿಭಾವದ ಕೊರತೆ ನಮ್ಮಲ್ಲಿದೆ. ತಿಳುವಳಿಕೆಯ ಕೊರತೆಯಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗುತ್ತಿದೆ. ನಮ್ಮ ಉದ್ದೇಶ ಅಮೃತತ್ವವನ್ನು ಪಡೆಯುವ ಉದ್ದೇಶವಾಗಬೇಕು. ನಮ್ಮಲ್ಲಿರುವ ನಂಬಿಕೆ ನಮ್ಮನ್ನು ನಡೆಸುತ್ತದೆ. ಅದನ್ನು ಗಟ್ಟಿಗೊಳಿಸುವ ಕೆಲಸ ನಮ್ಮದಾಗಬೇಕು. ಅತ್ಮ ತೃಪ್ತಿಗಾಗಿ ನಮ್ಮ ಕರ್ತವ್ಯವನ್ನು ಮಾಡಿಕೊಂಡು ಬರಬೇಕು. ಎಚ್ಚರದ ಬದುಕು ನಮ್ಮದಾಗಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುದೇವಾನಂದ ಸ್ವಾಮೀಜಿಯವರು ಹೇಳಿದರು.
ಅವರು ಆ.2ರಂದು ಒಡಿಯೂರು ಸಂಸ್ಥಾನದಲ್ಲಿ ನಡೆದ ನಾಗರಪಂಚಮಿ ಮಹೋತ್ಸವ ಹಾಗೂ ಸಾರ್ವಜನಿಕ ಆಶ್ಲೇಷ ಬಲಿಪೂಜೆಯ ಬಳಿಕ ಸಂದೇಶ ನೀಡಿದರು.
ನಾಗದೋಷಕ್ಕೆ ಜಾತಿ ಧರ್ಮವಿಲ್ಲ. ನಾಗನಲ್ಲಿ ನಾಲ್ಕು ವರ್ಣವಿದೆ. ಅದಕ್ಕೆ ಅದರದೇ ಆದ ವಿಸ್ತಾರವಿದೆ ಎನ್ನುವುದು ಸ್ಕಂದ ಪುರಾಣದಿಂದ ತಿಳಿದು ಬರುತ್ತದೆ. ಸಂಪತ್ತಿನ ಅದಿಪತಿ ನಾಗ, ಪ್ರಕೃತಿಯ ಉಳಿವಿಗಾಗಿ ನಾಗಾರಾಧನೆ ಅತೀ ಮುಖ್ಯ. ನಮ್ಮಲ್ಲಿರುವ ಆಧ್ಯಾತ್ಮಿಕತೆಯನ್ನು ಉಳಿಸುವ ಕೆಲಸವಾಗಬೇಕು. ಪುರಾತನ ಸಂಸ್ಕೃತಿಯನ್ನು ಉಳಿಸಬೇಕು. ಇತ್ತೀಚಿನ ದಿನಗಳಲ್ಲಿ ನಾಗನ ಕಲ್ಲಿನ ಸ್ಥಳಾಂತರ ಹೆಚ್ಚಾಗುತ್ತಿದೆ. ಆದರೆ ನಾಗನ ಸ್ಥಳಾಂತರ ಅಸಾದ್ಯ, ಅದು ಕೇವಲ ಭ್ರಮೆ ಮಾತ್ರ. ಅದರ ಶಕ್ತಿ ಅದೇ ಜಾಗದಲ್ಲಿ ಅಡಕವಾಗಿರುತ್ತದೆ. ನಾಗಾರಾಧನೆ ನಂಬಿಕೆಯ ಒಂದು ವಿಚಾರ. ನಂಬಿಕೆ ನಮ್ಮಲ್ಲಿಲ್ಲದಿದ್ದರೆ ಬದುಕು ಬದುಕಾಗದು. ನಾವು ಮಾಡಿದ ಸತ್ಕರ್ಮದಿಂದ ಸತ್ಪಲ ಸಿಗಲು ಸಾಧ್ಯ ಎಂದರು. ಸಾಧ್ವಿ ಮಾತಾನಂದಮಯೀ ದಿವ್ಯ ಸಾನಿಧ್ಯ ವಹಿಸಿದ್ದರು.
ಸಂಸ್ಥಾನದಲ್ಲಿ ಬೆಳಗ್ಗೆ ಆರಾದ್ಯ ದೇವರಿಗೆ ಮಹಾಪೂಜೆ, ಶ್ರೀ ಗಣಪತಿ ಹವನ, ಸ್ವಯಂಭೂ ನಾಗಸನ್ನಿದಿಯಲ್ಲಿ ಅಭಿಷೇಕ, ಸಾಮೂಹಿಕ ಆಶ್ಲೇಷ ಬಲಿಪೂಜೆ ನಡೆಯಿತು. ಮದ್ಯಾಹ್ನ ಮಹಾಪೂಜೆ ನಡೆದು ಪ್ರಸಾದ ವಿತರಣೆ ನಡೆಯಿತು.