ಮತದಾರರನ್ನು ಮತಗಟ್ಟೆಗೆ ಸೆಳೆಯಲು ಜಿಲ್ಲಾಡಳಿತದಿಂದ ಹೊಸ ಪ್ರಯತ್ನ

0

ಬಣ್ಣದ ಚಿತ್ರಗಳಿಂದ ಆಯ್ದ ಮತಗಟ್ಟೆಗಳ ಅಲಂಕಾರ

ಬಂಟ್ವಾಳ:ರಾಜ್ಯ ವಿಧಾನಸಭಾ ಚುನಾವಣೆಯ ದಿನಾಂಕ ಇನ್ನೇನು ಘೋಷಣೆಯಾಗಿ ನೀತಿಸಂಹಿತೆ ಜಾರಿಯಾಗಲು ದಿನಗಣನೆ ಆರಂಭವಾಗಿದೆ.ಈ ಹಂತದಲ್ಲಿ ರಾಜಕೀಯ ಪಕ್ಷಗಳು ಬಿರುಸಿನ ತಯಾರಿ ಆರಂಭಿಸಿದ್ದರೆ, ದ.ಕ.ಜಿಲ್ಲಾಡಳಿತವೂ ವಿವಿಧ ಹಂತದಲ್ಲಿ ತಮ್ಮ ತಯಾರಿಯಲ್ಲಿ ತೊಡಗಿದೆ.ಚುನಾವಣೆಯ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಲು ಕಾರ್ಯೋನ್ಮುಖವಾಗಿರುವ ದ.ಕ. ಜಿಲ್ಲಾಡಳಿತ ಆಯ್ದ ಮತಗಟ್ಟೆಗಳಲ್ಲಿ (ಶಾಲೆಗಳಲ್ಲಿ) ಬಣ್ಣದ ಚಿತ್ರಗಳನ್ನು ರಚಿಸಿ ಮತದಾರರನ್ನು ಮತಗಟ್ಟೆಗೆ ಸೆಳೆಯಲು ಹೊಸ ಪ್ರಯತ್ನ ನಡೆಸಿದೆ.


ಕರಾವಳಿಯ ಜಾನಪದ ಕಲೆಗಳಾದ ಯಕ್ಷಗಾನ, ಕಂಬಳ ಸೇರಿದಂತೆ ಪರಂಪರೆ ಮತ್ತು ಸಂಸ್ಕೃತಿ, ಗೋಗ್ರೀನ್, ನೀಲ ತರಂಗ, ಯುವ, ಸಖಿ, ವಿಕಲಚೇತನ ಈ ಎಂಟು ಪರಿಕಲ್ಪನೆಯಡಿ ಮತಗಟ್ಟೆ ಕೇಂದ್ರಗಳಾಗಿರುವ ಶಾಲೆಗಳನ್ನು ಬಣ್ಣದ ಚಿತ್ರಗಳಿಂದ ಅಲಂಕರಿಸುವ ಕಾರ್ಯ ನಡೆಯುತ್ತಿದೆ.ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 100 ಮತಗಟ್ಟೆಗಳನ್ನು ಚಿತ್ರಗಳಿಂದ ಅಲಂಕರಿಸುವ ಯೋಜನೆ ರೂಪಿಸಿರುವುದಾಗಿ ದ.ಕ.ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ತಿಳಿಸಿದ್ದಾರೆ.


ಚಿತ್ರಕಲಾ ಶಿಕ್ಷಕರ ತಂಡ ಮತಗಟ್ಟೆ ಕೇಂದ್ರಗಳಲ್ಲಿ ತಾಲೂಕಿನ ವಿವಿಧ ಶಾಲೆಗಳ ಚಿತ್ರಕಲಾ ಶಿಕ್ಷಕರ ತಂಡ ಚಿತ್ರ ಬಿಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.ಕೆಲವೊಂದು ಮತಗಟ್ಟೆಗಳಲ್ಲಿ ಈಗಾಗಲೇ ಚಿತ್ರ ಬಿಡಿಸುವ ಕಾರ್ಯ ಪೂರ್ಣಗೊಂಡಿದೆ.ಎಪ್ರಿಲ್ 10ರವರೆಗೆ ಮತಗಟ್ಟೆಗಳನ್ನು ಚಿತ್ರಗಳಿಂದ ಅಲಂಕರಿಸುವ ಕಾರ್ಯ ನಡೆಯಲಿದೆ.


ಮತದಾರರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸಲು, ಎಲ್ಲರೂ ಈ ಚುನಾವಣೆಯಲ್ಲಿ ಮುಕ್ತವಾಗಿ ಹಾಗೂ ಪಾರದರ್ಶಕವಾಗಿ ಭಾಗಿಯಾಗಬೇಕು ಎನ್ನುವ ಉದ್ದೇಶವನ್ನಿಟ್ಟುಕೊಂಡು ಮತಗಟ್ಟೆಗಳನ್ನು ಚಿತ್ರಗಳ ಮೂಲಕ ಆಕರ್ಷಿಸುವ ಹೊಸ ಪ್ರಯೋಗವನ್ನು ಮಾಡಲಾಗಿದೆ.ಮತದಾರ ಸಂಖ್ಯೆ ಎಲ್ಲಿ ಹೆಚ್ಚಾಗಿದೆ ಹಾಗೂ ಎಲ್ಲಿ ಮತದಾರ ಸಂಖ್ಯೆ ಕಡಿಮೆ ಇದೆಯೋ ಅಂತಹ ಮತಗಟ್ಟೆಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ.ಕಂಬಳ, ಯಕ್ಷಗಾನ, ನೀಲತರಂಗ, ಪರಂಪರೆ ಮತ್ತು ಸಂಸ್ಕೃತಿ, ಗೋಗ್ರೀನ್ ಈ ಪರಿಕಲ್ಪನೆಯ ಮತಗಟ್ಟೆಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಮತಗಟ್ಟೆಗಳಲ್ಲಿ ಮಾತ್ರ ಅಳವಡಿಸಿಕೊಳ್ಳಲಾಗಿದೆ ಎಂದು ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ತಿಳಿಸಿದ್ದಾರೆ.

ಈ ಹಿಂದೆ ಮತದಾನದ ಪ್ರಮಾಣ ಕಡಿಮೆಯಾಗಿರುವ ಮತಗಟ್ಟೆಗಳಲ್ಲಿ ಈ ಬಾರಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮತದಾರರನ್ನು ಮತಗಟ್ಟೆಗಳೆಡೆಗೆ ಸೆಳೆಯುವ ನಿಟ್ಟಿನಲ್ಲಿ ಈ ವಿಶೇಷ ಪ್ರಯತ್ನ ನಡೆಸಲಾಗುತ್ತಿದೆ.ಪುತ್ತೂರು ವಿಧಾನಸಭಾ ಕ್ಷೇತ್ರದ 12, ಬಂಟ್ವಾಳದ 13 ಸೇರಿದಂತೆ ಜಿಲ್ಲೆಯ ಸುಮಾರು 100 ಮತಗಟ್ಟೆಗಳನ್ನು ವಿಶೇಷ ಮತಗಟ್ಟೆಗಳೆಂದು ಪರಿಗಣಿಸಿ ಈ ರೀತಿ ವಿಶೇಷವಾಗಿ ಅಲಂಕರಿಸಲಾಗುತ್ತಿದೆ.

LEAVE A REPLY

Please enter your comment!
Please enter your name here