ಕಲ್ಲಡ್ಕ : ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಫೆ.28ರಂದು ಆಚರಿಸಲಾಯಿತು.
Inspiring Educator Award ಪುರಸ್ಕೃತರಾದ, ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ವಿಜ್ಞಾನ ಪ್ರಾಧ್ಯಾಪಕಿ ನಿಶಿತ ಕೆ.ಕೆ ಮಾತನಾಡಿ ನಮ್ಮ ಪ್ರಾಚೀನ ಕಾಲದ ಸಾಧು ಸಂತರೆಲ್ಲರು ವಿಜ್ಞಾನಿಗಳೇ ಆಗಿದ್ದಾರೆ. ಅಂದು ಯಾವುದೇ ತರದ ಆಧುನಿಕ ಸಲಕರಣೆಗಳು ಇಲ್ಲದಿದ್ದರೂ ಹಲವಾರು ಸಂಶೋಧನೆಗಳನ್ನು ಮಾಡಿದ್ದಾರೆ.ಅವರ ಬುದ್ಧಿಮತ್ತೆ, ಪ್ರೌಢಿಮೆ ಅಪಾರವಾದುದು. ಅವರ ಕೊಡುಗೆಗಳನ್ನು ನಾವು ಸ್ಮರಿಸಬೇಕು.ಅವರ ತಾಳ್ಮೆ, ಕಾರ್ಯನಿಷ್ಠೆಯನ್ನು ದಾರಿದೀಪವಾಗಿಟ್ಟುಕೊಳ್ಳಬೇಕು.ದಿನನಿತ್ಯದ ಸಮಸ್ಯೆಯನ್ನು ವೈಜ್ಞಾನಿಕ ದೃಷ್ಟಿಕೋನವಿಟ್ಟುಕೊಂಡು ಪ್ರಾಯೋಗಿಕವಾಗಿ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ವೈಜ್ಞಾನಿಕ ಮನೋಭಾವವನ್ನು ಇಟ್ಟುಕೊಂಡು ದೇಶಕ್ಕೆ ಅನುಕೂಲವಾಗುವಂತಹ ಅನ್ವೇಷಣೆ ಮಾಡಬೇಕು.ಯಾವುದೇ ಸಂಶೋಧನೆಯಾದರೂ ಅದು ಮುಂದಿನ ಪೀಳಿಗೆಗೆ ಅನುಕೂಲವಾಗುವಂತಿರಬೇಕು.ಇಲ್ಲದಿದ್ದರೆ ಅನಾಹುತ ಸಂಭವಿಸುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪುತ್ತೂರು ವಿವೇಕಾನಂದ ವಿದ್ಯಾವರ್ದಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ್ ಭಟ್, ಕುತೂಹಲವನ್ನು ಬೆಳೆಸಿದಾಗ ವಿಜ್ಞಾನಿಗಳಾಗುತ್ತಾರೆ.ಒಂದು ಗಿಡ ಯಾಕೆ ಮೇಲ್ಮುಖವಾಗಿ ಬೆಳೆಯುತ್ತದೆ? ಬೇರು ಯಾಕೆ ಕೆಳಗೆ ಹೋಗುತ್ತದೆ? ಹೀಗೆ ಪ್ರಶ್ನೆಗಳು ಹುಟ್ಟಿಕೊಂಡಾಗ ಅದಕ್ಕೆ ಉತ್ತರ ಹುಡುಕುತ್ತಾ ವಿಜ್ಞಾನಿಗಳಾಗುತ್ತೇವೆ. ಅಣು ಸಂಶೋಧನೆಯಿಂದ ಒಂದುದೇಶ ನಾಶವಾದಂತೆ ಸಂಶೋಧನೆ ಮಾಡಿದನ್ನು ಒಳ್ಳೆಯ ಕಾರ್ಯಕ್ಕೆ ಬಳಸಬೇಕು.ಸಂಶೋಧನೆಯು ದೇಶದ ಪ್ರಗತಿಗೆ ಪೂರವಾಗುವಂತೆ ಇರಬೇಕು ಎಂದರು.
ಕಾರ್ಯಕ್ರಮದಲ್ಲಿ ಗಣಿತ – ವಿಜ್ಞಾನಕ್ಕೆ ಸಂಬಂಧಪಟ್ಟಂತಹ ರಂಗೋಲಿ, ಚಿತ್ರಕಲೆ, ರಸಪ್ರಶ್ನೆ ಹಾಗೂ ಮಾದರಿ ಪ್ರದರ್ಶನದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ವಿದ್ಯಾರ್ಥಿಗಳೇ ತಯಾರಿಸಿದ “Clapping Lamp” ಎಂಬ ವಿಶಿಷ್ಟ ವಿಜ್ಞಾನ ಮಾದರಿ ಪ್ರದರ್ಶನಕ್ಕೆ ಅತಿಥಿಗಳು ಚಾಲನೆ ನೀಡಿದರು.
ವೇದಿಕೆಯಲ್ಲಿ ವಿಟ್ಲ ಪಶುಸಂಗೋಪನೆ ಇಲಾಖೆಯ ಹಿರಿಯ ಅಧಿಕಾರಿ ಮಂದಾರ ಜೈನ್, ಗಣಿತ ವಿಷಯದ ರಾಜ್ಯ ಸಂಪನ್ಮೂಲ ವ್ಯಕ್ತಿಯಾದ ವಿಟ್ಲ ಜೆಸಿಐ ನ ಅಧ್ಯಕ್ಷ ಪರಮೇಶ್ವರ ಹೆಗಡೆ, ಸಿವಿಲ್ ಇಂಜಿನಿಯರ್ ಶೆಲ್ಟರ್ ಅಸೋಸಿಯೇಟ್ಸ್ನ ಸಂತೋಷ್ ಶೆಟ್ಟಿ ಬೆಲ್ತಡ್ಕ, ಕಡಬ ಶ್ರೀ ಸರಸ್ವತಿ ವಿದ್ಯಾಲಯದ ಸಂಚಾಲಕ ವೆಂಕಟ್ರಮಣರಾವ್ ಮಂಕುಡೆ, ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ, ಸಹಸಂಚಾಲಕ ರಮೇಶ್ಎನ್, ಆಡಳಿತ ಮಂಡಳಿ ಸದಸ್ಯರಾದ ಮಲ್ಲಿಕಾ ಶೆಟ್ಟಿ ಹಾಗೂ ಮುಖ್ಯೋಪಾಧ್ಯಾರಾದರ ವಿರಾಜ್ ಕಣಂತೂರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ವೈದೇಹಿ ಪ್ರೇರಣಾ ಗೀತೆಹಾಡಿ, ವೈಷ್ಣವಿ ಕಾಮತ್ ನಿರೂಪಿಸಿ, ಸುಶ್ಮಿತಾ ಭಟ್ ಸ್ವಾಗತಿಸಿ, ಪ್ರೇಕ್ಷಾ ವಂದಿಸಿದರು.