ವಿಟ್ಲ: ಮಾಣಿ ಉಳ್ಳಾಲ್ತಿ ದೈವಸ್ಥಾನಕ್ಕೆ ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ 5.5 ಮೀ ಅಗಲದ ಉತ್ತಮ ಗುಣಮಟ್ಟದ ಕಾಂಕ್ರೀಟ್ ರಸ್ತೆ ನಿರ್ಮಾಣಗೊಳ್ಳುತ್ತಿದ್ದು, 600 ಮೀ ಉದ್ದದ ಈ ರಸ್ತೆಯ ಇಕ್ಕೆಲಗಳಲ್ಲಿ 4 ಅಡಿ ಅಗಲದ ಪೂಟ್ ಬಾತ್ ನಿರ್ಮಾಣಗೊಳ್ಳುತ್ತದೆ, ಜೊತೆಗೆ 3 ಕೋಟಿ ವೆಚ್ಚದಲ್ಲಿ ದಡಿಕೆಮಾರು, ಬಾಕಿಲ, ಅನಂತಾಡಿ ಸಂಪರ್ಕದ ರಸ್ತೆ ಶೀಘ್ರವಾಗಿ ಕಾಂಕ್ರೀಟ್ ಮಾಡಲು ಯೋಜನೆ ತಯಾರಿಸಲಾಗಿದೆ ಎಂದು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತುರವರು ಹೇಳಿದರು.
ಅವರು ಮಾಣಿ ಶ್ರೀ ಉಳ್ಳಾಲ್ತಿ ಮಾಡಕ್ಕೆ ಲೋಕೋಪಯೋಗಿ ಇಲಾಖೆ ಮೂಲಕ 2 ಕೋಟಿ ರೂ ಅನುದಾನದಲ್ಲಿ ಅಭಿವೃದ್ಧಿಗೊಳ್ಳುತ್ತಿರುವ ಕಾಂಕ್ರೀಟ್ ರಸ್ತೆ ಕಾಮಗಾರಿ ಯನ್ನು ವೀಕ್ಷಣೆ ಮಾಡಿ ಕಾಮಗಾರಿಯ ಪ್ರಗತಿಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಮಾಣಿ ಶ್ರೀ ಉಳ್ಳಾಲ್ತಿಅಮ್ಮನವರ ದೇವಸ್ಥಾನದ ಸಂಕ್ರಮಣ ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ಶಾಸಕರು ಈ ಬಾರಿಯ ಮಾಣಿ ಮೆಚ್ಚಿ ಜಾತ್ರೆಯ ಮುಂಗಡವಾಗಿ ರಸ್ತೆ ಕಾಮಗಾರಿ ಮುಗಿಸಿ , ಜನರ ಸಂಚಾರಕ್ಕೆ ಮುಕ್ತಗೊಳಿಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಲೋಕೋಪಯೋಗಿ ಇಲಾಖೆಯ ಎ.ಇ.ಇ.ಜೈ ಕುಮಾರ್, ಸಹಾಯಕ ಇಂಜಿನಿಯರ್ ಪ್ರೀತಮ್ ರಸ್ತೆಯ ಕಾಮಗಾರಿ ಮಾಹಿತಿ ನೀಡಿದರು.
ನೇರಳಕಟ್ಟೆ ಸಿ.ಎ. ಬ್ಯಾಂಕ್ ನ ಅಧ್ಯಕ್ಷರಾದ ಪುಷ್ಪರಾಜ ಚೌಟ, ಉಪಾಧ್ಯಕ್ಷ ತನಿಯಪ್ಪ ಗೌಡ, ಬಂಟ್ವಾಳ ಬಿಜೆಪಿ ಕಾರ್ಯದರ್ಶಿ ಗಣೇಶ್ ರೈ ಮಾಣಿ, ಗ್ರಾ.ಪಂ.ಸದಸ್ಯ ನಾರಾಯಣ ಶೆಟ್ಟಿ ತೋಟ, ಪ್ರಮುಖರಾದ ಸಂದೀಪ್ ಶೆಟ್ಟಿ ಅರೆಬೆಟ್ಟು, ಹರೀಶ್ ಮಾಣಿ,ವಿಶ್ವನಾಥ ಕುಲಾಲ್, ಅಶೋಕ್ ಶೆಟ್ಟಿ, ಯತೀಶ್, ನಿತಿನ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.