ಮಂಗಳೂರು: ದ.ಕ.ಜಿಲ್ಲೆಯಲ್ಲಿ 1100 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಎಲೆ ಚುಕ್ಕೆ ರೋಗ ಲಕ್ಷಣ ಕಂಡುಬಂದಿದ್ದು ಬೆಳ್ತಂಗಡಿ ತಾಲೂಕಿನಲ್ಲಿ 700 ಹೆಕ್ಟೇರ್, ಸುಳ್ಯ 200 ಹೆಕ್ಟೇರ್, ಪುತ್ತೂರು 100 ಹೆಕ್ಟೇರ್, ಬಂಟ್ವಾಳ 90 ಹೆಕ್ಟೇರ್ ಮತ್ತು ಮಂಗಳೂರು ತಾಲೂಕಲ್ಲಿ 10 ಹೆಕ್ಟೇರ್ ಪ್ರದೇಶದಲ್ಲಿ ರೋಗ ಕಂಡು ಬಂದಿದೆ ಎಂದು ತೋಟಗಾರಿಕೆ ಮತ್ತು ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಸಚಿವ ಎನ್.ಮುನಿರತ್ನ ತಿಳಿಸಿದರು.
ರಾಜ್ಯದಲ್ಲಿ 6.11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯನ್ನು ಬೆಳೆಯುತ್ತಿದ್ದು ವಾರ್ಷಿಕ 8.40 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗುತ್ತಿದೆ.ಪ್ರಸ್ತುತ ರಾಜ್ಯದಲ್ಲಿ ದಕ್ಷಿಣಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು,ಉತ್ತರ ಕನ್ನಡ, ಕೊಡಗು, ಉಡುಪಿ ಹಾಗೂ ಹಾಸನ ಜಿಲ್ಲೆಗಳ ಸುಮಾರು 42,504 ಹೆಕ್ಟೇರ್ ಪ್ರದೇಶಗಳಲ್ಲಿ ಎಲೆ ಚುಕ್ಕೆ ರೋಗ ಬಾಧಿಸುತ್ತಿರುವುದು ಕಂಡು ಬರುತ್ತಿದೆ.ಇಲಾಖೆಯಿಂದ ಅಡಿಕೆ ಎಲೆ ಚುಕ್ಕೆ ರೋಗ ಬಾಧಿತ ತೋಟಗಳಲ್ಲಿ ಕಾರ್ಯಗಾರ/ವಿಚಾರ ಸಂಕಿರಣಗಳನ್ನು ಏರ್ಪಡಿಸಲಾಗಿದ್ದು, ಇಲಾಖಾ ಹಾಗೂ ತಜ್ಞರು ಭೇಟಿ ನೀಡಿ ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದು,ಜಿಲ್ಲಾ ತೋಟಗಾರಿಕೆ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.
ರೋಗ ನಿಯಂತ್ರಣ ಮುಂಜಾಗ್ರತಾ ಕ್ರಮವಾಗಿ ಕರಪತ್ರ, ಪೋಸ್ಟರ್ಗಳನ್ನು ಮುದ್ರಿಸಿ ವಿತರಿಸಲಾಗುತ್ತದೆ.ಸರಕಾರದ ಆದೇಶದಂತೆ ಇಲಾಖೆಯಿಂದ 400 ಲಕ್ಷ ರೂ.ಗಳನ್ನು ರೋಗ ಬಾಧಿತ ಜಿಲ್ಲೆಗಳಿಗೆ ಸಸ್ಯ ಸಂರಕ್ಷಣಾ ಔಷಧಿಗಳ ವಿತರಣೆಗೆ ಒದಗಿಸಲಾಗಿದೆ. ಎಲೆ ಚುಕ್ಕೆ ರೋಗದಿಂದ ಒಣಗಿದ ಎಲ್ಲಾ ಎಲೆಗಳು ಜೋತುಬಿದ್ದು ಮರ ಶಕ್ತಿ ಕಳೆದುಕೊಂಡು ಕುಂಠಿತವಾಗುತ್ತದೆ. ತೇವ ಭರಿತ ಬಿಸಿಲಿನ ವಾತಾವರಣ, ಕಡಿಮೆ ಉಷ್ಣತೆ ಉಷ್ಣಾಂಶ
(18 ಇ ರಿಂದ 24 ಇ )ಮತ್ತು ಹೆಚ್ಚಿನ ಉಷ್ಣಾಂಶ (80ರಿಂದ 90ಶೇ.)ಈ ರೋಗದ ತೀವ್ರತೆ ಮತ್ತು ಹರಡುವಿಕೆಗೆ ಪೂರಕವಾದ ಅಂಶಗಳಾಗಿರುತ್ತವೆ ಎಂದು ಸಚಿವರು ಮಾಹಿತಿ ನೀಡಿದರು.
ಅಡಿಕೆ ಮರದ ಮೇಲೆ ಬಿಸಿಲು ಬೀಳುವಂತೆ ಮಾಡಲು ಅಂತರ ಬೆಳೆಗಳ ಅಥವಾ ಕಾಡು ಮರಗಳ ಹೆಚ್ಚುವರಿ ರೆಂಬೆಗಳನ್ನು ಕತ್ತರಿಸಿ ತೆಗೆಯುವುದು, ರೋಗದ ಪ್ರಾರಂಭಿಕ ಹಂತಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಶಿಲೀಂದ್ರ ನಾಶಕಗಳನ್ನು ಸಿಂಪಡಿಸುವುದು ಮೊದಲಾದ ಕ್ರಮಗಳನ್ನು ಕೈಗೊಳ್ಳಲು ಇಲಾಖೆಯಿಂದ ಸಿಬ್ಬಂದಿಗಳು ಆಯಾ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ನೀಡಲು ಆದೇಶಿಸಲಾಗಿದೆ ಎಂದು ಸಚಿವ ಮುನಿರತ್ನ ತಿಳಿಸಿದರು.
ಮುಂದಿನ ತಿಂಗಳು ಇಸ್ರೇಲ್ ಪ್ರವಾಸ ಕೈಗೊಳ್ಳಲಿದ್ದು ಜತೆಯಲ್ಲಿ ಕೃಷಿ ತಜ್ಞರ ತಂಡವೊಂದನ್ನು ಕರೆದೊಯ್ದು ಅಲ್ಲಿನ ತಜ್ಞರ ತಂಡದೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ಮುನಿರತ್ನ ತಿಳಿಸಿದರು.ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ನಿರ್ವಹಣಾ ಕ್ರಮಗಳು
ಅಡಿಕೆ ತೋಟಗಳಲ್ಲಿ ಬೇಸಿಗೆ ಕಾಲದಲ್ಲಿ ರೋಗ ಬಾಧಿತ ಒಣಗಿದ ಗರಿಗಳನ್ನು ಕತ್ತರಿಸಿ ತೆಗೆದು ನಾಶಪಡಿಸುವುದರಿಂದ ರೋಗ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟ ಬಹುದೆಂದು ತೋಟಗಾರರೊಬ್ಬರು ತಾನು ತೋಟ ಒಂದಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರತ್ಯಕ್ಷವಾಗಿ ತೋರಿಸಿ ಗಮನಕ್ಕೆ ತಂದರು.ಇದನ್ನು ಕೃಷಿ ವಿಜ್ಞಾನಿಗಳು ಮತ್ತು ತಜ್ಞರ ಜತೆ ಚರ್ಚಿಸಿ ಕಾರ್ಯಗತಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು.