ಗುಂಡ್ಯದಲ್ಲಿ ಬೀಡುಬಿಟ್ಟ ವಾಹನಗಳು
ಶಿರಾಡಿ ಘಾಟ್‌ನಲ್ಲಿ ವಾಹನ ಸಂಚಾರಕ್ಕೆ ಜು.15ರಂದು ಮಧ್ಯಾಹ್ನದ ವೇಳೆಗೆ ತಡೆಯೊಡ್ಡಲಾಗಿದೆ. ಇದರಿಂದಾಗಿ ಎಲ್ಲಾ ವಾಹನಗಳು ಗುಂಡ್ಯದಲ್ಲೇ ಬೀಡುಬಿಟ್ಟಿದ್ದವು. ಆದರೆ ಸಂಜೆ ವೇಳೆಗೆ ಬಸ್ಸು ಸೇರಿದಂತೆ ಇತರೇ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿದುಬಂದಿದೆ. ಆದರೆ ಟ್ಯಾಂಕರ್ ಸೇರಿದಂತೆ ಘನ ವಾಹನಗಳಿಗೆ ಸಂಚಾರಕ್ಕೆ ಅವಕಾಶ ನೀಡದೇ ಇದ್ದ ಹಿನ್ನೆಲೆಯಲ್ಲಿ ಗುಂಡ್ಯ, ಅಡ್ಡಹೊಳೆ ಮಧ್ಯೆ ಸಾಲುಗಟ್ಟಿ ನಿಂತಿವೆ ಎಂದು ವರದಿಯಾಗಿದೆ.
ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ೭೫ರ ಸಕಲೇಶಪುರ ತಾಲೂಕಿನ ದೋಣಿಗಲ್‌ನಲ್ಲಿ ಭೂಕುಸಿತ ಮುಂದುವರಿದಿದ್ದು ಈ ಹಿನ್ನೆಲೆಯಲ್ಲಿ ಜು.೧೫ರಿಂದ ಮುಂದಿನ ಆದೇಶದ ತನಕ ಶಿರಾಡಿ ಘಾಟ್‌ನ ಮಾರನಹಳ್ಳಿಯಿಂದ ದೊಣಿಗಲ್‌ವರಗಿನ ರಸ್ತೆಯಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಇದರಿಂದಾಗಿ ಶಿರಾಡಿ ಘಾಟ್‌ನಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದು ಟ್ಯಾಂಕರ್ ಸೇರಿದಂತೆ ಘನವಾಹನಗಳು ಗುಂಡ್ಯದಲ್ಲಿ ಬೀಡು ಬಿಟ್ಟಿವೆ.
ಜು.೧೪ರಂದು ಬೆಳಿಗ್ಗೆ ದೋಣಿಗಲ್ ಬಳಿ ರಾಷ್ಟ್ರೀಯ ಹೆದ್ದಾರಿ ೭೫ರ ಕೆಳಭಾಗದಲ್ಲಿ ಭೂಕುಸಿತ ಉಂಟಾದ ಹಿನ್ನಲೆಯಲ್ಲಿ ಬೆಳಿಗ್ಗೆ ೬ ಗಂಟೆಯಿಂದ ಸಂಜೆ ೬ ಗಂಟೆಯ ತನಕ ಏಕಮುಖವಾಗಿ ಎಲ್ಲಾ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿ, ಸಂಜೆ ೬ ಗಂಟೆಯಿಂದ ಬೆಳಿಗ್ಗೆ ೬ ಗಂಟೆಯ ತನಕ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು, ಕಾರುಗಳು, ಜೀಪು, ದ್ವಿಚಕ್ರ ವಾಹನಗಳು ಹಾಗೂ ತುರ್ತು ವಾಹನಗಳಿಗೆ (ಆಂಬುಲೆನ್ಸ್ ಮತ್ತು ಅಗ್ನಿಶಾಮಕ ವಾಹನ) ಮಾತ್ರ ಸಂಚರಿಸಲು ಅನುಮತಿಸಲಾಗಿತ್ತು. ಈ ಮಧ್ಯೆ ಶಿರಾಡಿ ಘಾಟ್‌ನ ಮಾರನಹಳ್ಳಿಯಿಂದ ದೊಣಿಗಲ್ ತನಕದ ಶಿರಾಡಿ ಘಾಟ್ ರಸ್ತೆಯಲ್ಲಿ ಭಾರಿ ಮಳೆಯಿಂದಾಗಿ ಗುಡ್ಡ ಕುಸಿತ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಜು.೧೫ರಿಂದ ಅನ್ವಯವಾಗುವಂತೆ ಮುಂದಿನ ಆದೇಶದ ತನಕ ಶಿರಾಡಿ ಘಾಟ್‌ನ ಮಾರನಹಳ್ಳಿ-ದೊಣಿಗಲ್ ತನಕ ಎಲ್ಲಾ ರೀತಿಯ ವಾಹನ ಸಂಚಾರ ನಿಷೇಧಿಸಿ ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್‌ರವರು ಜು.೧೫ರಂದು ಪರಿಷ್ಕೃತ ಆದೇಶ ಹೊರಡಿಸಿದ್ದಾರೆ. ಎಲ್ಲಾ ರೀತಿಯ ಲಘು ವಾಹನಗಳು ಹಾಸನ-ಅರಕಲಗೂಡು-ಕುಶಾಲನಗರ-ಸಂಪಾಜೆ ಹಾಗೂ
ಹಾಸನ-ಬೇಲೂರು-ಮೂಡಿಗೆರೆ-ಚಾರ್ಮಾಡಿ ಘಾಟ್ ಮೂಲಕ ಮತ್ತು ಸರಕು ಸಾಗಾಣಿಕೆ ಮಾಡುವ ವಾಹನಗಳು ಈ ಎರಡು ಮಾರ್ಗಗಳನ್ನು ಹೊರತುಪಡಿಸಿ ಇನ್ನಿತರೆ ಮಾರ್ಗದಲ್ಲಿ ಸಂಚರಿಸಲು ಜಿಲ್ಲಾಧಿಕಾರಿಯವರ ಆದೇಶದಲ್ಲಿ ಸೂಚಿಸಲಾಗಿದೆ.