2022ರೊಳಗೆ ಕಾಮಗಾರಿ ಮುಗಿಸುವ ಕುರಿತು ಚಿಂತನೆ
ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ನಗರದ ವಿವಿಧ ರಸ್ತೆಗಳಿಗೆ ಹೊಸ ಸ್ವರೂಪ ನೀಡಲು ಮುಂದಾಗಿದ್ದು, ಮಂಗಳೂರು ನಗರ ಪ್ರವೇಶಿಸುವ ಪಡೀಲ್ ಜಂಕ್ಷನ್‌ನಿಂದ ಪಂಪ್‌ವೆಲ್ ವರೆಗಿನ ರಸ್ತೆ ಅಭಿವೃದ್ಧಿಯ ಹಂತದಲ್ಲಿದೆ. ರಸ್ತೆ ಕಾಮಗಾರಿ ಸದ್ಯ ವೇಗ ಪಡೆದುಕೊಂಡಿದ್ದು, ಈ ವರ್ಷಾಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಲು ಸ್ಮಾರ್ಟ್‌ಸಿಟಿ ಯೋಜನೆ ರೂಪಿಸಲಾಗುತ್ತಿದೆ.
ಪಡೀಲ್‌ನಿಂದ ಪಂಪ್‌ವೆಲ್‌ವರೆಗೆ ಸುಮಾರು 2.8 ಕಿ.ಮೀ. ಉದ್ದದ ರಸ್ತೆ ಇದಾಗಿದ್ದು, ಇದೀಗ ಸುಮಾರು 26 ಕೋ. ರೂ. ವೆಚ್ಚದಲ್ಲಿ ಸ್ಮಾರ್ಟ್‌ಸಿಟಿಯಡಿಯಲ್ಲಿ ಈ ರಸ್ತೆ ಅಭಿವೃದ್ಧಿಗೊಳಿಸಲಾಗುತ್ತಿದೆ. ಸ್ಮಾರ್ಟ್ ರಸ್ತೆ ಪ್ಯಾಕೇಜ್-5ರಲ್ಲಿ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಗೊಳ್ಳುತ್ತಿದ್ದು, ಪಡೀ ಲ್ ಕಡೆಯಿಂದ ರಸ್ತೆ ಅಗಲ ಕಾಮಗಾರಿ ಈಗಾಗಲೇ ಆರಂಭಗೊಂಡಿದೆ. ಈ ಹಿಂದೆ ರಸ್ತೆ ಕಾಮಗಾರಿ ವೇಳೆ ಕೆಲಸ ಪೂರ್ಣಗೊಂಡ ಬಳಿಕ ಚರಂಡಿ ಕಾಮಗಾರಿ ನಡೆಯುತ್ತಿತ್ತು. ಆದರೆ ಇದೀಗ ಮೊದಲು ಚರಂಡಿ ಕಾಮಗಾರಿ ನಡೆಸಿ, ಬಳಿಕ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಸಲು ನಿರ್ಧರಿಸಲಾಗಿದೆ.
ಸದ್ಯ ಕ್ಯಾರೇಜ್ ವೇ, ಒಳಚರಂಡಿ ಕೆಲಸ ಪ್ರಗತಿಯಲ್ಲಿದ್ದು, ವಿದ್ಯುತ್ ಕಂಬ ಸ್ಥಳಾಂತರ ನಡೆಯುತ್ತಿದೆ. ಪಡೀಲ್ ಜಂಕ್ಷನ್‌ನಿಂದ ಜಿಲ್ಲಾಧಿಕಾರಿ ಕಚೇರಿ ನೂತನ ಸಂಕೀರ್ಣದವರೆಗೆ ಕಾಂಕ್ರೀ ಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಈಗಾಗಲೇ ಸುಮಾರು 10 ಮೀ. ಅಗಲದ ಡಾಮರೀಕೃತ ರಸ್ತೆ ಹೊಂದಿದೆ. ಇದೀಗ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಕಾಂಕ್ರೀಟ್ ರಸ್ತೆಯಾಗಿ ಪರಿವರ್ತನೆಯಾಗಲಿದೆ.
ಚತುಷ್ಪಥ ಕಾಂಕ್ರೀಟ್ ರಸ್ತೆ
ಪಡೀಲ್‌ನಿಂದ ಪಂಪ್‌ವೆಲ್‌ವರೆಗಿನ ರಸ್ತೆಯು ಸುಮಾರು 24 ಮೀ. ಅಗಲದ ಚತುಷ್ಪಥ ಕಾಂಕ್ರೀಟ್ ರಸ್ತೆಯಾಗಿ ಪರಿವರ್ತನೆಯಾಗಲಿದೆ. ಇದರಲ್ಲಿ 3.50 ಮೀ. ಅಗಲದ 4 ಲೇನ್ ಕಾಂಕ್ರೀಟ್ ವೇ, ರಸ್ತೆ ಇಕ್ಕೆಲದಲ್ಲಿ 3 ಮೀ. ಅಗಲದ ಇಂಟರ್‌ಲಾಕ್ ಅಳವಡಿಸಲಾಗುತ್ತದೆ.
ರಸ್ತೆ ಇಕ್ಕೆಲದಲ್ಲಿ ಫುಟ್‌ಪಾತ್, ಚರಂಡಿ, ಯುಟಿಲಿಟಿ ಡಕ್ಟ್, ರಸ್ತೆ ಮಧ್ಯೆ ಮೀಡಿಯನ್ ಜತೆಗೆ ದಾರಿ ದೀಪ ವ್ಯವಸ್ಥೆ ಇರಲಿದೆ.
ನೂತನ ರಸ್ತೆಯಿಂದ ಅನುಕೂಲ
ಪುತ್ತೂರು, ಉಪ್ಪಿನಂಗಡಿ ಮುಖೇನ ಮಂಗಳೂರು ನಗರ ಪ್ರವೇಶಕ್ಕಿರುವ ಪಡೀಲ್-ಪಂಪ್‌ವೆಲ್ ರಸ್ತೆ ಅಭಿವೃದ್ಧಿಯಿಂದ ಸಾರ್ವಜನಿಕರಿಗೆ ಉಪಯೋಗವಾಗಲಿದೆ. ಈ ಹಿಂದೆ ಈ ರಸ್ತೆ ಇಕ್ಕಟ್ಟಿದ್ದ ಕಾರಣ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು. ಇದೀಗ ಚತುಷ್ಪಥ ರಸ್ತೆ ನಿರ್ಮಾಣದೊಂದಿಗೆ ಸುಗಮ ವಾಹನ ಸಂಚಾರಕ್ಕೆ ಅನುಕೂಲವಾಗಲಿದೆ. ಒಂದು ವೇಳೆ ಪಂಪ್‌ವೆಲ್‌ನಲ್ಲಿ ಹೊಸದಾಗಿ ಬಸ್ ಟರ್ಮಿನಲ್ ನಿರ್ಮಾಣವಾದರೆ ಉಪಯೋಗವಾಗಲಿದೆ. ಈಗಾಗಲೇ ಪಡೀಲ್‌ನಲ್ಲಿ ಹೊಸದಾಗಿ ದ.ಕ. ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ನಿರ್ಮಾಣವಾಗುತ್ತಿರುವ ಕಾರಣದಿಂದ ಮುಂಬರುವ ದಿನಗಳಲ್ಲಿ ಈ ರಸ್ತೆಯಲ್ಲಿ ವಾಹನಗಳ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ. ಹೀಗಾಗಿ ಹೊಸ ಕಾಂಕ್ರೀಟ್ ರಸ್ತೆಯಾದರೆ ಪ್ರಯಾಣಿಕರಿಗೆ ನೆರವಾಗಬಹುದು. ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ಪ್ರಯಾಣಿಸುವ ಪ್ರಯಾಣಿಕರಿಗೂ ಇದರಿಂದ ಸಹಾಯವಾಗಲಿದೆ.