ಬಂಟ್ವಾಳ ಘಟಕದ ಹಿರಿಯ ಗೃಹರಕ್ಷಕರಿಗೆ ಸನ್ಮಾನ
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಬಂಟ್ವಾಳ ಘಟಕದ ಹಿರಿಯ ಗೃಹರಕ್ಷಕರಿಗೆ ಸೆ.23ರಂದು ಸನ್ಮಾನ ಕಾರ್ಯಕ್ರಮ ಬಂಟ್ವಾಳ ಗೃಹರಕ್ಷಕದಳದ ಘಟಕ ಕಚೇರಿಯಲ್ಲಿ ನಡೆಯಿತು. ವಿಜಯ್ ಕುಮಾರ್, ಮೆಟಲ್ ಸಂಖ್ಯೆ 435, ಇವರು 2004 ರಲ್ಲಿ ಗೃಹರಕ್ಷಕದಳದ ಸದಸ್ಯನಾಗಿ ಸೇರ್ಪಡೆಯಾಗಿ, 18 ವರ್ಷಗಳಿಂದ ನಿಷ್ಕಾಮ ಸೇವೆಯನ್ನು ಸಲ್ಲಿಸುತ್ತಾ ಬಂದಿರುತ್ತಾರೆ. ಇವರ ಸೇವಾ ಅವಧಿಯಲ್ಲಿ ಅನೇಕ ಬಂದೋಬಸ್ತ್ ಕರ್ತವ್ಯ, ಕವಾಯತು, ಚುನಾವಣೆ ಕರ್ತವ್ಯಗಳನ್ನು ನಿರ್ವಹಿಸಿರುತ್ತಾರೆ. ಇವರು ದಕ್ಷ, ಪ್ರಾಮಾಣಿಕ ಮತ್ತು ಮಾದರಿ ಗೃಹರಕ್ಷಕರಾಗಿದ್ದು, ಬಂಟ್ವಾಳ ಗೃಹರಕ್ಷಕದಳದ ಸದಸ್ಯರಾಗಿರುತ್ತಾರೆ. ಅವರ ಸೇವೆಯನ್ನು ಗುರುತಿಸಿ, ಗೌರವಿಸಿ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರ ಅಧ್ಯಕ್ಷತೆಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ದ. ಕ ಜಿಲ್ಲಾ ಸಮಾದೇಷ್ಟರು ಮಾತನಾಡಿ ನಿಷ್ಕಾಮ ಸೇವೆ, ಸೇವೆಯೇ ಪರಮಗುರಿ ಎನ್ನುವ ಧ್ಯೇಯ ವಾಕ್ಯದೊಂದಿಗೆ ಸಮಾಜ ಸೇವೆ ಮಾಡುತ್ತಾ ಕನಿಷ್ಠ ಗೌರವ ಧನಕ್ಕೆ ಕೆಲಸ ಮಾಡುವ ಗೃಹರಕ್ಷಕರು ನಮ್ಮ ದೇಶದ ಆಸ್ತಿ. ಜನರ ರಕ್ಷಣೆ ಮತ್ತು ಸಮಾಜದ ಆಸ್ತಿ ಪಾಸ್ತಿ ರಕ್ಷಣೆಯಲ್ಲಿ ಗ್ರಹರಕ್ಷಕರ ಪಾತ್ರ ಬಹಳ ದೊಡ್ಡದು. ನೈಸರ್ಗಿಕ ಮತ್ತು ಮಾನವ ನಿರ್ಮಿತ ದುರಂತಗಳಾದಾಗ ಸಮಾಜವನ್ನು ರಕ್ಷಿಸುವಲ್ಲಿ ಸಮಾಜದ ಆರೋಗ್ಯವನ್ನು ಕಾಪಾಡುವಲ್ಲಿ ಗೃಹರಕ್ಷಕರು ಬಹುಮುಖ್ಯ ಭೂಮಿಕೆ ವಹಿಸಿದ್ದಾರೆ ಎಂದು ನುಡಿದರು.
ಈ ಸಂದರ್ಭದಲ್ಲಿ ಬಂಟ್ವಾಳ ಘಟಕದ ಘಟಕಾಧಿಕಾರಿ ಶ್ರೀ ಐತಪ್ಪ, ಹಿರಿಯ ಗೃಹರಕ್ಷಕರಾದ ಜಯಂತ್, ಶಿವರಾಜ್, ಮಾಲತಿ ಹಾಗೂ ಗೃಹರಕ್ಷಕ ಗೃಹರಕ್ಷಕಿಯರು ಉಪಸ್ಥಿತರಿದ್ದರು.