ಮಂಗಳೂರು: ದೇಶದ ವಿವಿದೆಡೆ ಸೆ.22ರಂದು ದಾಳಿ ನಡೆಸಿರುವ ರಾಷ್ಟ್ರೀಯ ತನಿಖಾದಳದ ಅಧಿಕಾರಿಗಳು ಮಂಗಳೂರು ನಗರದ ನೆಲ್ಲಿಕಾಯಿ ರಸ್ತೆಯಲ್ಲಿರುವ ಪಿಎಫ್ಐ, ಎಸ್ ಡಿಪಿಐ ಕಚೇರಿಗೂ ದಾಳಿ ಮಾಡಿದ್ದಾರೆ. ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ಎನ್ಐಎ ದಾಳಿ ನಡೆಸಿದ್ದು ದಾಳಿಯ ವೇಳೆ ನೆಲ್ಲಿಕಾಯಿ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ದಾಳಿಯ ವೇಳೆ 200ಕ್ಕೂ ಅಧಿಕ ಮಂದಿ ಕಾರ್ಯಕರ್ತರು ಜಮಾವಣೆಗೊಂಡು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪೊಲೀಸರು 50ಕ್ಕೂ ಅಧಿಕ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ದಾಳಿ ಅಂತ್ಯಗೊಂಡ ಬಳಿಕ ಹಲವು ಮಹತ್ವದ ದಾಖಲೆಗಳು, ಕಡತಗಳು, ಲ್ಯಾಪ್ಟಾಪ್ ಗಳೊಂದಿಗೆ ಎನ್ಐಎ ಅಧಿಕಾರಿಗಳು ಮರಳಿದ್ದಾರೆ.
ಎಸ್.ಡಿ.ಪಿ.ಐ. ಮುಖಂಡರಾದ ವಿಟ್ಲದ ಬೋಳಂತೂರು ತಬ್ಸೀರ್ ಮತ್ತು ಪುತ್ತೂರು ಸಾಮೆತ್ತಡ್ಕದ ಅಬ್ದುಲ್ ಖಾದರ್ ಹಾಗೂ ಉಪ್ಪಿನಂಗಡಿ ಲಕ್ಮೀ ನಗರದ ಅಗ್ನಾಡಿಯ ಅಯೂಬ್ ಎಂಬವರ ಮನೆಗೆ ದಾಳಿ ನಡೆಸಿರುವ ಅಧಿಕಾರಿಗಳ ತಂಡ ತನಿಖೆ ನಡೆಸಿದ್ದು ದಾಖಲೆ ಪತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದಾಳಿ ಖಂಡಿಸಿ ದರ್ಬೆಯಲ್ಲಿ ಪಿಎಫ್ಐ ಕಾಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ವಿವಿದೆಡೆ ನಡೆದಿರುವ ಭಯೋತ್ಪಾದಕ ಕೃತ್ಯದ ತನಿಖೆಗಾಗಿ ಅಧಿಕಾರಿಗಳು ದಾಳಿ ನಡೆಸಿರುವುದಾಗಿ ಮಾಹಿತಿ ಲಭ್ಯವಾಗಿದೆ.