ಬಂಟ್ವಾಳ: ವಿವಿಧ ಯೋಜನೆಗಳಿಗೆ ಚಾಲನೆ ನೀಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಸೆ.2ರಂದು ಮಧ್ಯಾಹ್ನ ಮಂಗಳೂರಿಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನಿಂದ ಬಿಜೆಪಿ ವತಿಯಿಂದ 148 ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ಪ್ರತೀ ಪಂಚಾಯತ್ ಗಳಿಂದ ಎರಡು ಬಸ್ ಗಳಂತೆ ಒಟ್ಟು 52 ಗ್ರಾಮ ಪಂಚಾಯತ್ ಗಳಿಂದ ಬಸ್ ಗಳ ವ್ಯವಸ್ಥೆ ಕಲ್ಪಿಸಲಾಗಿದೆ.
ಪಂಚಾಯತ್ ಮಾತ್ರವಲ್ಲದೆ ಇತರ ಕಡೆಗಳಿಂದಲೂ ಬಸ್ ವ್ಯವಸ್ಥೆ ಮಾಡಲಾಗಿದ್ದು ಬಂಟ್ವಾಳ ತಾಲೂಕಿನಿಂದ ಒಟ್ಟು 20,000 ಕಾರ್ಯಕರ್ತರು ಹಾಗೂ ಸಾರ್ವಜನಿಕರು ಮಂಗಳೂರಿನಲ್ಲಿ ನಡೆಯಲಿರುವ ಮೋದಿ ಸಮಾವೇಶಕ್ಕೆ ತೆರಳಿದ್ದಾರೆ ಎಂದು ಬಂಟ್ವಾಳ ತಾಲೂಕು ಬಿಜೆಪಿ ಅಧ್ಯಕ್ಷ ದೇವಪ್ಪ ಬಾಳಿಕೆ ತಿಳಿಸಿದ್ದಾರೆ. ಬೆಳಿಗ್ಗೆ ಬಂಟ್ವಾಳದಿಂದ ಮಂಗಳೂರಿನ ಕೂಳೂರಿನಲ್ಲಿರುವ ನಡೆಯಲಿರುವ ಸಮಾವೇಶಕ್ಕೆ ತೆರಳುವ ಬಸ್ ಗಳಿಗೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತುರವರು ಚಾಲನೆ ನೀಡಿದ್ದಾರೆ.